ಹಾಸನ: ಗೊಬ್ಬರ ಕಲಬೆರಕೆ ಆಗಿರುವ ಬಗ್ಗೆ ರೈತರಿಗೆ ಅನುಮಾನ ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ದೂರು ನೀಡಿದರೆ ಪರಿವೀಕ್ಷಕರು ಭೇಟಿ ನೀಡಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಒಂದು ವೇಳೆ ಕಲಬೆರಕೆ ಸಾಬೀತಾದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಹಾಸನದ ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಅನಿತಾ ಅವರು ತಿಳಿಸಿದರು.
ದುದ್ದ ಹೋಬಳಿಯ ಕಬ್ಬಳಿಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಈಚೆಗೆ ರಸಗೊಬ್ಬರ ಕಲಬೆರಕೆ ಮತ್ತು ಅನ್ವಯಿಸುವ ವಿಧಾನಗಳ ಬಗ್ಗೆ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸಗೊಬ್ಬರ ಉತ್ಪಾದನಾ ಹಂತದಲ್ಲಿ ಗುಣಮಟ್ಟ ನಿಯಂತ್ರಣ ತಂಡವಿರುವುದರಿಂದ ಅಲ್ಲಿ ಕಲಬೆರಕೆ ಹೆಚ್ಚಾಗಿ ಆಗಲು ಸಾಧ್ಯವಿಲ್ಲ. ಆದರೆ ಮಾರುಕಟ್ಟೆಗೆ ಬರುವ ವೇಳೆಗೆ ಕಲಬೆರಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಉದಾಹರಣೆಗೆ ಯುರಿಯಾ ಗೊಬ್ಬರದಲ್ಲಿ ಹರಳುಗಳು ಭೌತಿಕವಾಗಿ ಸಮಗಾತ್ರ, ಸಮರೂಪ ಮತ್ತು ಹೊಳೆಯುತ್ತಿರುತ್ತವೆ. ಒಂದು ವೇಳೆ ಈ ಗುಣಗಳು ಕಾಣದೇ ಇದ್ದರೆ ಅಥವಾ ಈ ಗೊಬ್ಬರವು ಸಂಪೂರ್ಣವಾಗಿ ನೀರಿನಲ್ಲಿ ಕರಗದೆ ಇದ್ದರೆ ಕಲಬೆರಕೆ ಆಗಿರುವುದು ಎಂದರ್ಥ. ಅದೇ ರೀತಿ ಡಿಎಪಿ ಗೊಬ್ಬರವನ್ನು ರೈತರು ತಗಡಿನ ತಟ್ಟೆಯಲ್ಲಿಟ್ಟು ಬಿಸಿ ಮಾಡಿದಾಗ ಅದು ಅರಳದೆ ಇದ್ದರೆ ಅಥವಾ ತಟ್ಟೆಗೆ ಅಂಟದೆ ಇದ್ದರೆ ಗೊಬ್ಬರವು ಕಲಬೆರಕೆಯಾಗಿದೆ ಎಂದರ್ಥ ಮತ್ತು ಬಣ್ಣವಿರುವ ಮಿಶ್ರಿತ ಗೊಬ್ಬರಗಳನ್ನು ನೀರಿನಲ್ಲಿ ಕರಗಿಸಿದಾಗ ಬಣ್ಣ ಬಿಟ್ಟರೆ ಕಲಬೆರಕೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.