ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. 
ಜಿಲ್ಲೆ

ರಸಗೊಬ್ಬರ ಅಭಾವ ಸೃಷ್ಟಿಸಿದರೆ ಸೂಕ್ತಕ್ರಮ

ಬಾಗಲಕೋಟೆ: ಪ್ರಸಕ್ತ ಹಿಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದ್ದು, ರಸಗೊಬ್ಬರಗಳ ಅಭಾವ ಸೃಷ್ಟಿಸಿದರೆ ಅಂತಹವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದುಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಇದ್ದು, ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹಿಂಗಾರಿ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಹಾಗೂ ಕಬ್ಬು ಸೇರಿದಂತೆ ಇತರೆ ಬೆಳೆಗಳ ಒಟ್ಟು 3.10 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ 12280 ಹೆಕ್ಟೆರ್ ಬಿತ್ತನೆಯಾಗಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಮಳೆ ನಿರಂತರವಾಗುತ್ತಿರುವದರಿಂದ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ. ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ 7 ಕೇಂದ್ರಗಳು ಸೇರಿ ಒಟ್ಟು 25 ಕೇಂದ್ರಗಳ ಮೂಲಕ ರಿಯಾಯಿತಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 6 ತಾಲೂಕು ಸೇರಿ ಜೋಳ 830 ಕ್ವಿಂಟಲ್, ಮುಸುಕಿನ ಜೋಳ 300 ಕ್ವಿಂಟಲ್, ಗೋದಿ 3760 ಕ್ವಿಂಟಲ್, ಕಡಲೆ 14095 ಕ್ವಿಂಟಲ್, ಶೇಂಗಾ 4700 ಕ್ವಿಂಟಲ್, ಸೂರ್ಯಕ್ರಾಂತಿ 30 ಕ್ವಿಂಟಲ್, ಕುಸುಬೆ 20 ಕ್ವಿಂಟಲ್ ಸೇರಿ ಒಟ್ಟು 23735 ಕ್ವಿಂಟಲ್ ಬೀತ್ತನೆ ಬೀಜ ವಿತರಣೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮುಸುಕಿನ ಜೋಳ, ಗೋದಿ, ಕಡಲೆ, ಸೂರ್ಯಕ್ರಾಂತಿ ಹಾಗೂ ಶೇಂಗಾ ಬೀಜ ಸೇರಿದಂತೆ ಒಟ್ಟು 16500 ಕ್ವಿಂಟಲ್ ಹೆಚ್ಚುವರಿ ಬೇಡಿಕೆ ಇಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಸದ್ಯ ರಸಗೊಬ್ಬರದ ಕೊರತೆ ಇರುವದಿಲ್ಲ. ಲಭ್ಯವಿರುವ ದಾಸ್ತಾನು ಪೈಕಿ ಯೂರಿಯಾ 13549 ಮೆ.ಟನ್, ಡಿ.ಎ.ಪಿ 1605 ಮೆ.ಟನ್, ಕಾಂಪ್ಲೇಕ್ಸ 17440 ಮೆ.ಟನ್, ಎಂ.ಒ.ಪಿ 2019 ಮೆ.ಟನ್, ಎಸ್.ಎಸ್.ಪಿ 1691 ಮೆ.ಟನ್ ಲಭ್ಯವಿದ್ದು, ರೈತರು ಯೂರಿಯಾ ರಸಗೊಬ್ಬರ ಒಂದನ್ನೆ ಹೆಚ್ಚು ಬಳಸಿದಲ್ಲಿ ರೋಗ ಮತ್ತು ಕೀಟಬಾಧೆಗೆ ತುತ್ತಾಗಲಿದೆ. ಸಸ್ಯ ಸಮಗ್ರ ಪೋಷಣೆಗೆ ವಿವಿಧ ಬಗೆಯ ರಸಗೊಬ್ಬರ ಬಳಸುವುದು ಸೂಕ್ತ. ಕಾಂಪ್ಲೇಕ್ಸ್ ಗೊಬ್ಬರ ಹೆಚ್ಚಿಗೆ ಬಳಸಿದಲ್ಲಿ ಸೂಕ್ತವೆಂದು ತಿಳಿಸಿದರು. ಮಾರಾಟಗಾರರು ರಸಗೊಬ್ಬರದ ಅಭಾವ ಸೃಷ್ಟಿಸಿದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಉಪನಿರ್ದೇಶಕ ಎಚ್.ಪಿ.ಕೋಳೇಕರ, ಕೃಷಿ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ ಸೇರಿದಂತೆ ಜಿಲ್ಲಾ ಕೃಷಿ ಮಾರಾಟಗಾರರ ಸಂಘದ ಪ್ರತಿನಿಧಿಗಳು, ವಿವಿಧ ರಸಗೊಬ್ಬರ ಉತ್ಪಾದನ ಸಂಸ್ಥೆಗಳ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.