ಜಿಲ್ಲೆ

ರಸಗೊಬ್ಬರ ಅಭಾವ ಆಗುವಂತಿಲ್ಲ

ಯಾದಗಿರಿ: ರೈತರ ಹಿತ ಕಾಯಲು ಜಿಲ್ಲಾಡಳಿತ ಬದ್ದವಾಗಿದ್ದು, ಅವರಿಗೆ ಕೃಷಿ ಚಟುವಟಿಕೆಗಳಿಗೆ ಏನೂ ಕೊರತೆಯಾಗದಂತೆ ನಿಗಾವಹಿಸಿ, ಯಾವುದೇ ದೂರು ಬರದಂತೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಕೃತಕ ಅಭಾವ ಸೃಷ್ಠಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಸಂಬಂಸಿದ ಅಕಾರಿಗಳಿಗೆ ಜಿಲ್ಲಾಕಾರಿ ಡಾ.ಸುಶೀಲಾ ಬಿ., ಖಡಕ್ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ದಾಸ್ತಾನು ನಿರ್ವಹಣೆ ಹಾಗೂ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೃಷಿ ಇಲಾಖೆ ಅಕಾರಿಗಳು ಪ್ರತಿದಿನ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ವಿವರ ಹಾಗೂ ದರಗಳನ್ನು ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಿರುವ ಕುರಿತು ಪರಿಶೀಲಿಸಬೇಕು . ರೈತರಿಗೆ ಕಳಪೆ ಬೀಜ,ರಸಗೊಬ್ಬರ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿದರ್ೇಶನ ನೀಡಿದರು.

ಜಿಲ್ಲೆಯಲ್ಲಿ ಈ ಹಿಂದೆ ರೇಕ್ ಪಾಯಿಂಟ್ ಸಮಸ್ಯೆ ಇತ್ತು. ಸಮಸ್ಯೆಯು ಬಗೆಹರೆದಿದ್ದು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಪಾಯಿಂಟ್ನಲ್ಲಿ ಕುಡಿಯುವ ನೀರು, ಅಕಾರಿಗಳಿಗೆ ಆಸನದ ವ್ಯವಸ್ಥೆ ಇತರೆ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ರೈತರು ಮನವಿ ಜಿಲ್ಲಾಕಾರಿಗೆ ಮನವಿ ಮಾಡಿದರು.

ಪ್ರಸ್ತುತ ಹಂಗಾಮಿನಲ್ಲಿ ಯೂರಿಯಾ ಹಾಗೂ ಇತರೆ ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರ ಹಿತಾಸಕ್ತಿ ಕಾಪಾಡುವಲ್ಲಿ ಎಲ್ಲ ವಿತರಕರು, ಪೂರೈಕೆದಾರರು ಮತ್ತು ಇಲಾಖೆ ಅಕಾರಿಗಳು ಶ್ರಮಿಸಬೇಕು. ಮುಖ್ಯವಾಗಿ ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಜಿಲ್ಲಯಲ್ಲಿ ಶೇ.80 ರಷ್ಟು ಬಿತ್ತನೆಯಾಗಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ತಾವೇ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.