ಹಾಸನ: ಶಾಂತಿ ನಗರದ ಬಳಿ ಇರುವ ಚಾಣಕ್ಯ ಸಭಾಂಗಣದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ವತಿಯಿಂದ ಸಾಲು ಮರದ ತಿಮ್ಮಕ್ಕ ಪ್ರತಿಷ್ಠಾನದ ವತಿಯಿಂದ ನೀಡುವ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಗೌರವಾಧ್ಯಕ್ಷ ರವಿನಾಕಲಗೂಡು ಅವರಿಗೆ ಬುಧವಾರ ಸಂಜೆ ಅಭಿನಂದನೆ ಸಲ್ಲಿಸಲಾಯಿತು. ಜತೆಗೆ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರಾ ನಾಯಕರಹಳ್ಳಿ ಮಾತನಾಡಿ, ರವಿನಾಕಲಗೂಡು ಅವರಿಗೆ ಅಭಿನಂದನೆ ಸಲ್ಲಿಸಲು ಹೆಮ್ಮೆಯಾಗುತ್ತದೆ. ಅವರು ಸದಾ ನೊಂದವರ ಪರ ಧ್ವನಿಯಾಗುವ ಜೀವ. ಆಡು ಮುಟ್ಟದ ಸೊಪ್ಪಿಲ್ಲ, ರವಿನಾಕಲಗೂಡು ಸೇವೆ ಮಾಡದ ಕ್ಷೇತ್ರವಿಲ್ಲ ಎಂಬ ಮಾತಂತೆ ಅವರು ಪತ್ರಿಕಾ ಕ್ಷೇತ್ರ, ಕನ್ನಡ- ನಾಡು- ನುಡಿ, ಸಮಾಜ ಸೇವೆ ಹೀಗೆ ಎಲ್ಲರ ಪರವಾಗಿ ನಿಂತು ಕೆಲಸ ಮಾಡುತ್ತಾರೆ. ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿನಾಕಲಗೂಡು ಅವರು, ನಾವು ನಡೆದು ಬಂದ ದಾರಿಯನ್ನು ಎಂದೂ ಮರೆಯಬಾರದು. ಮರೆತರೆ ಅಹಂಕಾರ ಆವರಿಸುತ್ತದೆ. ಮನುಷ್ಯ ಬರುವಾಗ ಏನನ್ನೂ ತರುವುದಿಲ್ಲ. ಹೋಗುವಾಗ ಎಲ್ಲರ ವಿಶ್ವಾಸ ಗಳಿಸಿ ಹೋಗಬೇಕು. ಪತ್ರಿಕಾ ಕ್ಷೇತ್ರದಲ್ಲಿ ಎಲ್ಲರ ಧ್ವನಿಯಾಗಿ, ಕನ್ನಡ-ನಾಡು -ನುಡಿಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಕೃಷಿ ಕುಟುಂಬದಲ್ಲಿ ಹುಟ್ಟಿ ಹಾಸನ ನಗರಕ್ಕೆ ಬಂದಾಗ ಪತ್ರಿಕೆ ಹಾಕುವ ಮೂಲಕ ಪ್ರಾರಂಭವಾದ ಬದುಕು ಸಂಪಾದಕನಾಗುವ ತನಕ ಬೆಳೆಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷನಾಗಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರತಿನಿಧಿಯಾಗಿ, ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿಯಿಂದ ಸಾಲು ಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಸಿಗಲು ನಿಮ್ಮೆಲ್ಲರ ಸಹಕಾರ ಕಾರಣ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಾಹಿತಿಗಳಾದ ಚಂದ್ರಕಾಂತ ಪಡೆಸೂರು, ಡಾ. ನಾಯಕರಹಳ್ಳಿ ಮಂಜೇಗೌಡ, ನಾಯಕರಹಳ್ಳಿ ಲೋಕೇಶ್, ತಮ್ಲಾಪುರ ಗಣೇಶ, ಭಾರತ ಸೇವಾ ದಳದ ವಿ.ಎಸ್. ರಾಣಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾಂಚನಮಾಲಾ, ಗೋಪಾಲ್, ಕಸಾಪ ನಿಕಟಪೂರ್ವ ಪದಾಧಿಕಾರಿಗಳಾದ ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಸೋಮ ನಾಯಕ್, ಹರಳಹಳ್ಳಿ ರಂಗಸ್ವಾಮಿ, ಅಡಗೂರು ಕೇಶವಮೂರ್ತಿ, ಅಂಕಪುರ ಹೇಮಂತ್ ಗೌಡ, ಭೂವನಹಳ್ಳಿ ತಮ್ಮಯ್ಯಣ್ಣ, ಗೋಳೆನಹಳ್ಳಿ ಸತೀಶ, ಚಿತ್ರಕಲಾ ಶಿಕ್ಷಕರಾದ ಶಿವಕುಮಾರ, ಚನ್ನಪಟ್ಟಣ ಅನಂದ, ಭಾರತಿ ವಿದ್ಯಾಮಂದಿರ ರಮೇಶ, ಮಧು, ಶಿಕ್ಷಕರಾದ ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.