ಜಿಲ್ಲೆ

ರಮ್ಮನಹಳ್ಳಿ ಅಭಿವೃದ್ಧಿಪಡಿಸುವಲ್ಲಿ ಶಾಸಕ ಜಿಟಿಡಿ ವಿಫಲ

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಶಾಸಕ ಜಿ.ಟಿ.ದೇವೇಗೌಡ ವಿಫಲರಾಗಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್ ಆರೋಪಿಸಿದರು.


ಪಟ್ಟಣ ಪಂಚಾಯಿತಿ ಮಾನ್ಯತೆ ಹೊಂದಿರುವ ರಮ್ಮನಹಳ್ಳಿ ಒಂದು ಕುಗ್ರಾಮಕ್ಕಿಂತಲೂ ಕಡೆಯಾಗಿದೆ. ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿನ ರಸ್ತೆಗಳು ಡಾಂಬರ್ ಕಂಡು ಅದೆಷ್ಟೋ ವರ್ಷಗಳಾಗಿವೆ. ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯವಿಲ್ಲದ ಕಾರಣ ಶಾಲಾ- ಕಾಲೇಜುಗಳಿಗೆ ಮೈಸೂರಿಗೆ ತೆರಳಲು ಮಕ್ಕಳು ಪರದಾಡುವಂತಾಗಿದೆ. ಬೆಳಗ್ಗೆ ಬರುವ ಎರಡು ಬಸ್‌ಗಳು ಗ್ರಾಮಕ್ಕೆ ಬರುವಾಗಲೇ ಜನರಿಂದ ತುಂಬಿ ತುಳುಕುವ ಕಾರಣ ಪ್ರಾಥಮಿಕ ಶಾಲೆಗಳಿಗೆ ಹೋಗುವ ಇಲ್ಲಿನ ಮಕ್ಕಳು ಬಸ್‌ನಲ್ಲಿ ತೆರಳಲು ಕಷ್ಟಪಡುವಂತಾಗಿದೆ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಗ್ರಾಮದಿಂದ ಮೈಸೂರಿಗೆ ಆಸ್ಪತ್ರೆಗಳಿಗೆ ತೆರಳಲು ರೋಗಿಗಳು, ಗರ್ಭಿಣಿಯರು, ವೃದ್ಧರು ಸಹ ಬಸ್ ಸೌಲಭ್ಯವಿಲ್ಲದೆ ಖಾಸಗಿ ವಾಹನ ಅವಲಂಬಿಸಿದ್ದಾರೆ. ಹೀಗಾಗಿ ಶಾಸಕ ಜಿ.ಟಿ.ದೇವೇಗೌಡ ಅವರು ಗ್ರಾಮಕ್ಕೆ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.


20 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ದೊಡ್ಡ ಗ್ರಾಮವಾಗಿದ್ದರೂ ಇಲ್ಲಿ ಐದು ದಿನಕ್ಕೊಮ್ಮೆ ನೀರು ಬರುತ್ತಿದೆ. ಸರ್ಕಾರಿ ಪ್ರೌಢಶಾಲೆ, ಜಾನುವಾರು ಆಸ್ಪತ್ರೆ, ಲೈಬ್ರರಿ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯ ದೊರಕುತ್ತಿಲ್ಲ. ಗ್ರಾಮದ ಪಕ್ಕದಲ್ಲಿ ಹರಿಯುವ ವರುಣ ನಾಲೆಯ ಸೇತುವೆ ಶಿಥಿಲಗೊಂಡಿದ್ದು, ಕುಸಿಯುವ ಭೀತಿ ಎದುರಾಗಿದೆ. ಯುಜಿಡಿ ಕಾಮಗಾರಿ ಅಪೂರ್ಣವಾಗಿದೆ ಎಂದು ದೂರಿದ್ದಾರೆ.


ಕೂಡಲೇ ಶಾಸಕರು ರಮ್ಮನಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.