ಕಲಬುರಗಿ: ನಗರದ ಸೇಡಂ ರಸ್ತೆಯ ವಿಮಾನ ನಿಲ್ದಾಣ, ಕೇಂದ್ರೀಯ ವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಸಂಸದ ಡಾ.ಉಮೇಶ ಜಾಧವ್ ಕಾರ್ಯಚಟುವಟಿಕೆ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು.
ವಿಮಾನ ನಿಲ್ದಾಣ ಸಲಹಾ ಸಮಿತಿ ಅಧ್ಯಕ್ಷರೂ ಆದ ಜಾಧವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಕುರಿತು ಪರಾಮರ್ಶೆ ನಡೆಯಿತು. ಇಲ್ಲಿನ ರನ್‌ವೇ ಮೇಲ್ದರ್ಜೆಗೇರಿಸುವ ಬಗ್ಗೆ ಚರ್ಚಿಸಲಾಯಿತು.ದೊಡ್ಡ ಮತ್ತು ಭಾರವಾದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಖಚಿತಪಡಿಸಿಕೊಳ್ಳುವುದನ್ನು ಗುರುತಿಸಿ, ಈ ಯೋಜನೆಗೆ ಹಣಕಾಸಿನ ನೆರವು ಪಡೆಯಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಂಪರ್ಕಿಸಿ ಮನವಿಪತ್ರ ಸಲ್ಲಿಸಲಾಗಿತ್ತು. ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿ ೨೬ ಕೋಟಿ ರೂ.ಅನುದಾನ ಮಂಜೂರು ಮಾಡಿದೆ ಎಂದರು.
ಸಮರ್ಪಕ ನೀರು ಸರಬರಾಜು, ವಿಮಾನ ನಿಲ್ದಾಣದಿಂದ ಕಲಬುರಗಿ ನಗರದವರೆಗೆ ಬೀದಿದೀಪ, ವಿಮಾನ ನಿಲ್ದಾಣದ ಆವರಣದ ಸುತ್ತಲೂ ಸುಧಾರಿತ ಭೂದೃಶ್ಯ ಮತ್ತು ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿ ಒದಗಿಸುವ ಅಗತ್ಯತೆ ಕುರಿತು ಸಮಿತಿ ಸದಸ್ಯರು ಸಂಸದರ ಗಮನಕ್ಕೆ ತಂದರು. ವಿಮಾನ ನಿಲ್ದಾಣದ ತಡೆರಹಿತ ಕಾರ್ಯನಿರ್ವಹಣೆಗೆ ಅಗತ್ಯವಿರುವ ಈ ಪ್ರಮುಖ ಅಂಶ ಕುರಿತು ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಭೆ ಸೇರಿ ಚರ್ಚಿಸಲಾಗುವುದು ಎಂದು ಜಾಧವ್ ಹೇಳಿದರು.
೫೦೦ ಕೋಟಿ ರೂ.ಪ್ರಸ್ತಾವನೆ: ಕಲಬುರಗಿ ವಿಮಾನ ನಿಲ್ದಾಣ ಹಂತ, ಹಂತವಾಗಿ ಅಭಿವೃದ್ಧಿಪಡಿಸಲು ಒಟ್ಟು ೫೦೦ ಕೋಟಿ ರೂ. ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಾಧವ್ ಹೇಳಿದರು. ದೀರ್ಘಾವಧಿ ಅಭಿವೃದ್ಧಿ ಯೋಜನೆಗಳ ಮೇಲೆ ಬೆಳಕು ಚೆಲ್ಲಿದ ಜಾಧವ್, ಪ್ರಸ್ತಾವಿತ ಉಪಕ್ರಮಗಳಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ, ಅಪ್ರಾನ್ ಮತ್ತು ಟ್ಯಾಕ್ಸಿವೇ ವಿಸ್ತರಣೆ, ಹೊಸ ವಾಯು ಸಂಚಾರ ನಿಯಂತ್ರಣ ಸೌಲಭ್ಯ, ಕಾರ್ಯಾಚರಣೆ ಸೇರಿ ಇತರೆ ಸೌಲಭ್ಯಗಳಿಗಾಗಿ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಮುಖ್ಯ ಕಚೇರಿಯಿಂದ ಚೆನ್ನೆÊ ವಿಭಾಗೀಯ ಕಚೇರಿಯ ಮುಖ್ಯಸ್ಥರು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ಅವರಿಂದ ಸಮಗ್ರ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.
ಸಂಗಮೇಶ ಕಲ್ಯಾಣಿ, ನರಸಿಂಹ ಮೆಂಡನ್, ಆಕಾಶ ರಾಥೋಡ್, ಗುರುರಾಜ ಭಂಡಾರಿ ಇತರರು ಇದ್ದರು. ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ಮತ್ತು ಡಿಜಿಎಂ (ಸಿವಿಲ್) ಕೆ.ಬಸವರಾಜ ಅವರು ವಿಮಾನ ನಿಲ್ದಾಣದ ಗುಣಮಟ್ಟ ಉನ್ನತೀಕರಿಸಲು ಎಲ್ಲ ಅಭಿವೃದ್ಧಿ ಉಪಕ್ರಮಗಳ ಕುರಿತು ವಿವರಣೆ ನೀಡಿದರು.