ಜಿಲ್ಲೆ

ರನ್ ವೇ ವಿಸ್ತರಣೆಗೆ ಯೋಜನೆ

Dharwad

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ ರನ್ ವೇ ಟ್ರ್ಯಾಕ್ ವಿಸ್ತರಣೆ ಮಾಡಲಾಗುವುದು. ತದನಂತರ ಹುಬ್ಬಳ್ಳಿಯಿಂದ ನೇರವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಅಲಯನ್ಸ್ ಏರ್​ವೇಸ್​ನ ಹುಬ್ಬಳ್ಳಿ- ಹೈದರಾಬಾದ್ ವಿಮಾನ ಸೇವೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಕೂಡ ವಿಮಾನ ಹಾರಾಟ ನಡೆಸಲು ಅವಕಾಶವಿದೆ. ಸ್ವಯಂಚಾಲಿತ ಲ್ಯಾಂಡಿಂಗ್ ವ್ಯವಸ್ಥೆ ಇದೆ. ರನ್​ವೇ ವಿಸ್ತರಣೆ ನಂತರ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭವಾಗಲಿವೆ. ಈ ನಿಟ್ಟಿನಲ್ಲಿ ಪ್ರಾಚ್ಯ ರಾಷ್ಟ್ರಗಳಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.

ಈಗಾಗಲೇ ಮುಂಬೈ, ಅಹಮದಾಬಾದ್, ಕೊಚ್ಚಿ, ಕೊಣ್ಣೂರು, ಗೋವಾಕ್ಕೆ ವಿಮಾನಯಾನ ಸೌಲಭ್ಯವಿದೆ. ಕರೊನಾ ನಂತರದ ಸ್ಥಿತಿ ಗತಿ ನೋಡಿಕೊಂಡು ಇತರ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಟ್ರೂ ಜೆಟ್ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಅಲಯನ್ಸ್ ಏರ್​ವೇಸ್ ಸಿಇಒ ಹರಪ್ರೀತ್ ಎ.ಡಿ. ಸಿಂಗ್ ಮಾತನಾಡಿ, ಹುಬ್ಬಳ್ಳಿಯು ಮಹತ್ವದ ನಗರವಾಗಿದ್ದು, ಇನ್ನಷ್ಟು ವಿಮಾನಯಾನ ಸಂಪರ್ಕದ ಅವಶ್ಯಕತೆ ಇದೆ. ಕೇಂದ್ರ ಸಚಿವ ಜೋಶಿ ಅವರ ಮನವಿ ಮೇರೆಗೆ ಹೈದರಾಬಾದ್​ಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕ- ತೆಲಂಗಾಣ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಭದ್ರತಾ ಅಧಿಕಾರಿ ಜಗದೀಶ ಹಂಚಿನಾಳ, ಏರ್ ಇಂಡಿಯಾ ಮ್ಯಾನೇಜರ್ ನಾಗೇಂದ್ರ, ಮತ್ತಿತರರು ಇದ್ದರು.

ಎಚ್​ಎಎಲ್ ಜತೆ ಒಪ್ಪಂದ

ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಚ್​ಎಎಲ್​ನೊಂದಿಗೆ ನಾಗರಿಕ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ನಿರ್ಧರಿಸ ಲಾಗಿದೆ ಎಂದು ಅಲಯನ್ಸ್ ಏರ್​ವೇಸ್ ಸಿಇಒ ಹರಪ್ರೀತ್ ಎ.ಡಿ. ಸಿಂಗ್ ತಿಳಿಸಿದರು.

ಮಂಗಳೂರಿಗೆ ಸೇವೆ ಶೀಘ್ರ

ಹುಬ್ಬಳ್ಳಿ- ಹೈದರಾಬಾದ್ ವಿಮಾನ ಸೇವೆ ಬಹುದಿನಗಳ ಬೇಡಿಕೆಯಾಗಿತ್ತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ ಸಿಂಗ್ ಪುರಿ ಅವರ ವಿಶೇಷ ಪ್ರಯತ್ನದಿಂದ ಹೈದರಾಬಾದ್ ನಗರಕ್ಕೆ ವಿಮಾನ ಸೇವೆ ಆರಂಭವಾಗಿದೆ. ಸದ್ಯ ವಾರದಲ್ಲಿ ಮೂರು ದಿನ (ಸೋಮ, ಬುಧ, ಶುಕ್ರವಾರ) ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಗಮನಿಸಿ ಮುಂದಿನ ದಿನಗಳಲ್ಲಿ ವಾರದ ಏಳು ದಿನವೂ ಸೇವೆ ವಿಸ್ತರಿಸಲಾಗುವುದು. ಶೀಘ್ರದಲ್ಲೇ ಹುಬ್ಬಳ್ಳಿ- ಮಂಗಳೂರು ವಿಮಾನ ಸೇವೆ ಆರಂಭಿಸಲಾಗುವುದು ಎಂದು ಅಲಯನ್ಸ್ ಏರ್​ವೇಸ್ ಸಿಇಒ ತಿಳಿಸಿದರು.

EndFragment