ಬಸವಕಲ್ಯಾಣದಲ್ಲಿ ಮೂರು ದಿನದ ಮಹಾತ್ಮ ಬಸವೇಶ್ವರ ಜಾತ್ರಾ ಅಮೃತ ಮಹೋತ್ಸವ ನಿಮಿತ್ತ ಶನಿವಾರ ಬೆಳಗ್ಗೆ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ರಥೋತ್ಸವ ಅದ್ದೂರಿಯಾಗಿ ನೆರವೇರಿತು. 
ಜಿಲ್ಲೆ

ರಥೋತ್ಸವ ವೈಭವ ಕಣ್ತುಂಬಿಕೊಂಡ ಭಕ್ತರು

ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಮಹಾತ್ಮ ಬಸವೇಶ್ವರ ಜಾತ್ರಾ ಅಮೃತ ಮಹೋತ್ಸವ ನಿಮಿತ್ತ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ರಥ ಮೈದಾನದಲ್ಲಿ ಶನಿವಾರ ಅದ್ದೂರಿ ರಥೋತ್ಸವ ಜರುಗಿತು. ನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತಸಮೂಹ ಈ ಅಪೂರ್ವ ಘಳಿಗೆಯನ್ನು ಕಣ್ತುಂಬಿಕೊಂಡಿತು.

ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿಯಿಂದ ಬಸವ ಜಯಂತಿ ಅಂಗವಾಗಿ ಮೂರು ದಿನ ನಗರದಲ್ಲಿ ಹಮ್ಮಿಕೊಂಡಿದ್ದ ೭೫ನೇ ಜಾತ್ರಾ ಮಹೋತ್ಸವ ಶನಿವಾರ ಬೆಳಗ್ಗೆ ವೈಭವದ ರಥೋತ್ಸವ ಮೂಲಕ ಸಮಾರೋಪಗೊಂಡಿತು.

ಶುಕ್ರವಾರ ರಾತ್ರಿ ಸಾಂಸ್ಕೃತಿಕ ವೈಭವದೊಂದಿಗೆ ಶುರುವಾದ ಪಲ್ಲಕ್ಕಿ ಹಾಗೂ ನಂದಿ ಧ್ವಜಗಳ ಮೆರವಣಿಗೆ ಶನಿವಾರ ರಥ ಮೈದಾನಕ್ಕೆ ತಲುಪಿದ ನಂತರ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಜಗಜ್ಯೋತಿ ಬಸವಣ್ಣನವರಿಗೆ ಜಯವಾಗಲಿ ಘೋಷಣೆಗಳು ಮಾರ್ದನಿಸಿದವು. ಇನ್ನೊಂಡೆದೆ ಬಾನಂಗಳದಲ್ಲಿ ಪಟಾಕಿಗಳು ಮೂಡಿಸಿದ ರಂಗು-ರಂಗಿನ ಚಿತ್ತಾರ ಆಕರ್ಷಕವಾಗಿತ್ತು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಎಸ್ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶೆಪ್ಪ ಸಕ್ಕರಭಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ವಿಸ್ವಸ್ಥ ಸಮಿತಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪ ಹಲಶೆಟ್ಟೆ, ಸೋಮಶೇಖರಯ್ಯ ವಸ್ತçದ, ಮಲ್ಲಿನಾಥ ಮಂಠಾಳೆ, ಶಿವಶರಣ ನೂಲಿಚಂದಯ್ಯ ಹಾಗೂ ಶಿವಶರಣ ಮಾದಾರ ಚನ್ನಯ್ಯ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಧರ್ಮಣ್ಣ ಭೆಂಡೆ, ಅಶೋಕ ಮೇಟಕಾರ ಭಾಗವಹಿಸಿದ್ದರು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಡಾ.ರುದ್ರಮಣಿ ಮಠಪತಿ ಹಾಗೂ ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಪಶು ಪ್ರದರ್ಶನದಲ್ಲಿ ಭಾಗವಹಿಸಿದ್ದ ಅತ್ಯುತ್ತಮ ತಳಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಜಾತ್ರೋತ್ಸವ ಯಶಸ್ಸಿಗೆ ಸಹಕರಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು.

ನಂದಿ ಧ್ವಜಗಳ ಮೆರವಣಿಗೆ ವೈಭವ: ಜಾತ್ರೆ ಅಮೃತೋತ್ಸವ ನಿಮಿತ್ತ ನಗರದಲ್ಲಿ ಶುಕ್ರವಾರ ರಾತ್ರಿಯಿಡೀ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ವೈಭವದ ಮೆರವಣಿಗೆ ಜರುಗಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ, ನಂದಿಧ್ವಜಗಳ ಪೂಜೆ ನಂತರ ಕೋಟೆಗೆ ಬರಲು ಮಧ್ಯರಾತ್ರಿ ೧೨ ದಾಟಿತ್ತು. ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಖ್ಯರಸ್ತೆ ಮಾರ್ಗವಾಗಿ ರಥ ಮೈದಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ದಣಿಯದೆ ಮೂವರು ಬಾಲಕರು ಸಣ್ಣ ನಂದಿ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷ ಎನಿಸಿತು. ವಿಶೇಷ ಸಮವಸ್ತ್ರ ಧರಿಸಿದ ಬಸವ ಭಕ್ತರು ನಂದಿ ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಸೊಲ್ಲಾಪುರದ ಲೇಜಿಮ್ ಮತ್ತು ಡೊಳ್ಳು ತಂಡದಿಂದ ಆಕರ್ಷಕ ಪ್ರದರ್ಶನ ನಡೆಯಿತು. ಅಲಂಕೃತ ವಾಹನದಲ್ಲಿ ಶಿವಶರಣ ನೂಲಿ ಚಂದಯ್ಯ ಮೂರ್ತಿ ಇಟ್ಟು ಪಲ್ಲಕ್ಕಿ ಮೆರವಣಿಗೆ ನಡೆದರೆ, ಕೋಟೆ ಬಳಿ ನಂದಿ ಧ್ವಜ ಹಾಗೂ ಶಿವಶರಣ ನೂಲಿ ಚಂದಯ್ಯ ಪಲ್ಲಕ್ಕಿಗೆ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆ ಆರಂಭಕ್ಕೂ ಮುನ್ನ ದೇವಸ್ಥಾನದಲ್ಲಿ ಪಲ್ಲಕ್ಕಿ ಪೂಜೆಯನ್ನು ಮಹಾರಾಷ್ಟçದ ಮಾಜಿ ಸಚಿವ ಬಸವರಾಜ ಪಾಟೀಲ್ ಮುರುಮ್ ನೆರವೇರಿಸಿದರು. ಶಾಸಕ ಶರಣು ಸಲಗರ ಇದ್ದರು.

ಸಂಜೆಯಿಂದ ಬೆಳಗ್ಗಿನವರೆಗೆ ಸಾಂಸ್ಕೃತಿಕ ಸೊಬಗು: ರಥ ಮೈದಾನದಲ್ಲಿ ಶುಕ್ರವಾರ ಸಂಜೆ ಶುರುವಾದ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಬೆಳಗ್ಗೆವರೆಗೆ ನಡೆಯಿತು. ಬಸವೇಶ್ವರ ಕನ್ನಡ ಪ್ರೌಢ ಶಾಲಾ ಮಕ್ಕಳ ವಚನನೃತ್ಯ ಹಾಗೂ ನಾಟಕ ಪ್ರದರ್ಶನ ಗಮನ ಸೆಳೆಯಿತು. ಕನ್ನಡ ಕೋಗಿಲೆ ವಿನ್ನರ್ ಸಿಂಗರ್ ಖಾಸೀಂ ಹಾಗೂ ಮಹಿಳಾ ಹಾಡುಗಾರ್ತಿ ಪೃಥ್ವಿ ಭಟ್, ಬೀದರ್‌ನ ನಾಗರಾಜ ಜೋಗಿ, ಹಾಸ್ಯ ಕಲಾವಿದ ಐಜಿನಾಥ ಸಜ್ಜನಸೆಟ್ಟಿ ತಂಡದೊಂದಿಗೆ ವೈವಿಧ್ಯಮಯ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯಪುರ ಜಿಲ್ಲೆ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘದ ಕಲಾವಿದರು ಬೆಳಗ್ಗಿನ ಜಾವದವರೆಗೆ ನಾಟಕ ಪ್ರದರ್ಶನ ನೀಡಿದರು.

ಬಿಗಿ ಪೊಲೀಸ್ ಬಂದೋಬಸ್ತ್ : ಮುಂಜಾಗ್ರತಾ ಕ್ರಮವಾಗಿ ರಥ ಮೈದಾನ ಮತ್ತು ಮೆರವಣಿಗೆ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬರೀಶ್ ವಾಗ್ಮೋಡೆ, ಸುರೇಶ ಹಜ್ಜರಗಿ, ಸಂಚಾರಿ ಠಾಣೆ ಪಿಎಸ್‌ಐ ಸಿದ್ದೇಶ್ವರ, ಗ್ರಾಮೀಣ ಠಾಣೆ ಪಿಎಸ್‌ಐ ನಾಗೇಂದ್ರ, ಹುಲಸೂರು ಠಾಣೆ ಪಿಎಸ್‌ಐ ಶಿವಪ್ಪ ಮೇಟಿ, ಮಂಠಾಳ ಕ್ರೈ ವಿಭಾಗದ ಪಿಎಸ್‌ಐ ರಾಚಯ್ಯ ಸ್ವಾಮಿ ಸ್ಥಳದಲ್ಲಿದ್ದು ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದರು.