ಹಾಸನ : ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅಲಂಕೃತ ರಥೋತ್ಸವದ ಮುಂದೆ ಕುರಾನ್ ಪಠಣ ನಡೆಯಬಾರದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ರಕ್ಷಿತ್ ಭಾರದ್ವಾಜ್ ಹೇಳಿದರು.
ದೇವಾಲಯದ ಆಡಳಿತ ಮಂಡಳಿಯ ಮ್ಯಾನ್ಯುಯಲ್‌ನಲ್ಲಿ ಇರುವ ಪದ್ಧತಿಯಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಥದ ಮುಂದೆ ನಡೆಯುವ ಕುರಾನ್ ಪಠಣದ ಬಗ್ಗೆ ಮ್ಯಾನ್ಯುಯಲ್‌ನಲ್ಲಿ ಯಾವುದೇ ಉಲ್ಲೇಖ ಇಲ್ಲ. ಆದುದರಿಂದ ರಥದ ಮುಂದೆ ಕುರಾನ್ ಪಠಣ ನಿಲ್ಲಿಸಬೇಕು. ಈ ಹಿಂದೆ ನಡೆಯುತ್ತಿದ್ದಂತೆ ಶಾಂತಿಯುತ ಉತ್ಸವ ನಡೆಯಬೇಕು ಎಂದರು.
ಚನ್ನಕೇಶವ ಸ್ವಾಮಿ ಎದುರು ನಿಂತು ಅಲ್ಲಾ ಒಬ್ಬನೇ ದೇವರು ಎಂಬ ಪ್ರಾರ್ಥನೆ ಮಾಡುವ ಸಂಸ್ಕೃತಿ ಧಾರ್ಮಿಕ ಭಾವನೆಗೆ ದಕ್ಕೆ ತರಲಿದೆ. ನಾಳೆಯೂ ಇಂತಹ ಪ್ರಕರಣ ನಡೆದರೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ವಿಕಾಸ್, ಅನೂಪ್, ಅಭಿಷೇಕ್ ಇತರರು ಇದ್ದರು.