ವಿಜಯವಾಣಿ ಸುದ್ದಿಜಾಲ ಶಿರಸಿ: ಶಕ್ತಿದೇವತೆಯಾದ ಮಾರಿಕಾಂಬಾ ದೇವಿ ಜಾತ್ರಾ ಗದ್ದುಗೆಗೆ ಆಗಮಿಸುವ ಬೃಹತ್ ರಥಕ್ಕೆ ವಾಟೆ ಕೋಲಿನ ಪತಾಕೆ ಸಿದ್ಧಪಡಿಸುವ ಕಾರ್ಯ ದೇವಾಲಯದಲ್ಲಿ ಭರದಿಂದ ಸಾಗಿದೆ. ಗ್ರಾಮೀಣ ಭಾಗದ ಮರಾಠಿಗರು ಸಾವಿರಾರು ವಾಟೆ ಕೋಲು ಸಂಗ್ರಹಿಸಿ ರಥವನ್ನು ಶೃಂಗರಿಸುವ ಕಾರ್ಯಕ್ಕೆ ಅಣಿಯಾಗಿದ್ದಾರೆ.
ರಥದ ಪತಾಕೆ ಕಟ್ಟಲು ದೇವಾಲಯದ ಸಭಾ ಮಂಟಪದಲ್ಲಿ ವಾಟೆ ಕೋಲಿನ ರಾಶಿಯನ್ನು ಪೇರಿಸಿಡಲಾಗಿದೆ. ಇದೇ ವಾಟೆಯನ್ನು ಬಳಸಿ, ದೇವಿ ಮೆರವಣಿಗೆಯಲ್ಲಿ ಸಾಗುವ ರಥವನ್ನು ಶೃಂಗರಿಸಲಾಗುತ್ತದೆ. ಶತಮಾನಗಳಿಂದ ತಾಲೂಕಿನ ಗ್ರಾಮೀಣ ಭಾಗವಾದ ಬಂಡಲದ ಮರಾಠಿ ಕುಟುಂಬದವರು ಈ ಕಾಯಕವನ್ನು ನಿರ್ವಹಿಸುತ್ತಾರೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಈ ಬಾರಿ ಮಾರ್ಚ್ 3ರಿಂದ ಆರಂಭವಾಗಲಿದೆ. ಜಾತ್ರೆಗೆ ಎಂಟು ದಿನಗಳ ಪೂರ್ವದಲ್ಲಿ ರಥ ಕಟ್ಟುವ ಕಾರ್ಯ ಶುರುವಾಗುತ್ತದೆ. ಆಚಾರಿಗಳು ಗಾಲಿ, ಮರದ ತುಂಡುಗಳನ್ನು ಜೋಡಿಸುವ ಕೆಲಸ ಮಾಡುತ್ತಾರೆ. ನಂತರ ಅದರ ಮುಂದಿನ ಭಾಗವಾದ ಹಗ್ಗ ಬಿಗಿಯುವ, ಕೋಲು ಕಟ್ಟಿ ಪತಾಕೆ ಹಾಕುವ ಕಾರ್ಯವನ್ನು ಮರಾಠಿಗರು ಮಾಡುತ್ತಾರೆ. ಪತಾಕೆ ಹಾಕಲು ವಾಟೆ ಕೋಲನ್ನು ಬಳಸುತ್ತಾರೆ. ಪೊಳ್ಳಾದ ಬಿದಿರು ಜಾತಿಯ ಈ ಕೋಲು ತಾಳಿಕೆ ಬರುವುದಿಲ್ಲ. ಹೀಗಾಗಿ, ಕಳೆದ ಜಾತ್ರೆಯಲ್ಲಿ ಬಳಸಿರುವ ಕೋಲಿನಲ್ಲಿ ಗಟ್ಟಿಮುಟ್ಟಾಗಿರುವುದನ್ನು ಆಯ್ಕೆ ಮಾಡಿಕೊಂಡು ಈ ಜಾತ್ರೆಗಾಗಿ ಉಳಿಸಿಕೊಳ್ಳಲಾಗುತ್ತದೆ.
ಹೊಸ ಕೋಲನ್ನು ಬಸವರಾಜ ಗೌಡರ ನೇತೃತ್ವದಲ್ಲಿ ರಾಗಿಹೊಸಳ್ಳಿ ಹೆಬ್ರೆ ಗ್ರಾಮಸ್ಥರು ಸಂಗ್ರಹಿಸುತ್ತಾರೆ. ಈಗಾಗಲೇ 3000ದಷ್ಟು ವಾಟೆ ಬಿದಿರು ದೇವಾಲಯಕ್ಕೆ ಬಂದಿದೆ. ಪತಾಕೆ ಕಟ್ಟಲು ಅಗತ್ಯವಿರುವ ಬಿದಿರನ್ನು ಇದೇ ಗ್ರಾಮದವರು ಒದಗಿಸುತ್ತಾರೆ.
ಬೆಣ್ಣೆಹಳ್ಳದ ಅಂಚಿನಲ್ಲಿ ಬೆಳೆಯುವ ಈ ಬಿದಿರಿಗೆ ಮುಳ್ಳು ಇರುವುದಿಲ್ಲ. ರಥ ಕಟ್ಟುವ ಸಮಯ ಹತ್ತಿರವಾಗುತ್ತಿದ್ದಂತೆ ಹೆಬ್ರೆಯ ಬಹುತೇಕ ಎಲ್ಲ ಮನೆಯವರು ತಮ್ಮ ಕೈಲಾದಷ್ಟು ಬಿದಿರನ್ನು ಸಂಗ್ರಹಿಸಿಕೊಡುತ್ತಾರೆ. ಹಳ್ಳಿಯಲ್ಲಿ ಬಿದಿರು ಸಂಗ್ರಹ ನಡೆಯುತ್ತಿದ್ದರೆ, ನಗರದಲ್ಲಿ ಟೇಲರ್ಗಳು ಆಕರ್ಷಕ ಪತಾಕೆ ಸಿದ್ಧಪಡಿಸುತ್ತಿದ್ದಾರೆ.
ನಮ್ಮ ಕುಟುಂಬದ ಎಂಟು ಜನರು ದಿನ ಕೆಲಸ ಮಾಡಿ, ಅಡಕೆ ದಬ್ಬೆ ಕಟ್ಟುವುದು, ವಾಟೆ ಕೋಲಿಗೆ ಪತಾಕೆ ಸಿಕ್ಕಿಸುವುದನ್ನು ಮಾಡುತ್ತೇವೆ. ನಮ್ಮ ಹಿರಿಯರ ಕಾಲದಿಂದ ರೂಢಿಸಿಕೊಂಡು ಬಂದಿರುವ ಪದ್ಧತಿ ಇದು. ಬಿದಿರಿಗೆ ಕಟ್ಟೆ ಬಂದಿರುವುದರಿಂದ ವಾಟೆ ಬೆಳೆಯುವ ಪ್ರಮಾಣ ಕೂಡ ಕಡಿಮೆಯಾಗಿದೆ. ಈ ವರ್ಷ ಸುಮಾರು 5000 ವಾಟೆ ಕೋಲು ಬೇಕಾಗಬಹುದೆಂದು ಅಂದಾಜಿಸಲಾಗಿದೆ. | ದೇವರಾಜ ಮರಾಠಿ, ಮರಾಠಿ ಸಮುದಾಯದ ನಾಯಕ