ಜಿಲ್ಲೆ

ರಣಕಹಳೆ ಬಿಡಿ ಮೊದಲು ಬ್ಯಾಂಡ್ ಬಾಜಾ ಬಾರಿಸೋದು ಕಲಿಯಿರಿ ! ಶಾಸಕ ಯಶವಂತರಾಯಗೌಡಗೆ ಡಾ. ಎಂ.ಬಿ. ಪಾಟೀಲ ತಿರುಗೇಟು

ವಿಜಯಪುರ: ರಣಕಹಳೆ ಊದುವುದು ಬಿಡಿ ಮೊದಲು ಬ್ಯಾಂಡ್‌ಬಾಜಾ ಊದುವುದು ಕಲಿಯಿರಿ ಎನ್ನುವ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆಗೆ ಡಾ.ಎಂ.ಬಿ. ಪಾಟೀಲ ತಿರುಗೇಟು ನೀಡಿದರು.

ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ನನ್ನ ವಿರುದ್ಧ ರಣಕಹಳೆ ಮೊಳಗಿಸಿದರೂ ನಾನು ಸೋತಿಲ್ಲ. ಈಗ ಇಂಡಿ ಶಾಸಕ ರಣಕಹಳೆ ಮೊಳಗಿಸುವುದಾಗಿ ಹೇಳಿದ್ದಾರೆ. ರಣಕಹಳೆ ಬಿಡಿ ಮೊದಲು ಬ್ಯಾಂಡ್ ಬಾಜಾ ಬಾರಿಸುವುದು ಕಲಿಯಿರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ನನಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಜಿಲ್ಲೆ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಯಶವಂತರಾಯಗೌಡರ ಸರ್ಟಿಫಿಕೇಟ್ ನನಗೆ ಬೇಡ. ಇಂಡಿ ನೀರಾವರಿ ಕೆರೆ ತುಂಬುವ ಯೋಜನೆ ನಿಜಕ್ಕೂ ನನ್ನ ಕೂಸು. ನೀರಾವರಿ ಯೋಜನೆಯಲ್ಲಿ ಕೆರೆ ತುಂಬುವ ಯೋಜನೆಯೇ ಇರಲಿಲ್ಲ. ಅದು ರೂಪಿಸುವಂತೆ ಮಾಡಿದ್ದೇ ನಾನು. ಹೀಗಾಗಿ ಹೊಟ್ಟೆ ಉರಿಯಿಂದ ಮಾತನಾಡಿದರೆ ಏನೂ ಮಾಡಲಾಗಲ್ಲ. ಹೊಟ್ಟೆ ಉರಿಗೆ ಮದ್ದಿಲ್ಲ ಎಂದರು.

ಬಿಎಲ್‌ಡಿಇ ವಿಷಯ:

ಬಂಥನಾಳದ ಸಂಗನಬಸವ ಶ್ರೀಗಳು ಸಂಪಾದಿಸಿದ ಪುಣೆಯ ಹಡಪ್ಸರ್ ಆಸ್ತಿ ಯಾರು ಗಡಪ್ ಮಾಡಿದರು ಎಂಬುದು ಮುಂದೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ಬಿಎಲ್‌ಡಿಇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ನಮ್ಮ ಮನೆತನದ ಪಾತ್ರವಿದೆ. ನನ್ನ ತಂದೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಅಲ್ಲಿನ ನೌಕರರಿಗೆ ಸಂಬಳ ಕೊಡಲು ಸಹ ಹಣ ಇರಲಿಲ್ಲ. ನನ್ನ ತಂದೆ ಜಮೀನು ಮಾರಿ ಸಿಬ್ಬಂದಿ ಸಂಬಳ ಮಾಡಿದ್ದಾರೆ. 1980 ರಲ್ಲಿ ಇಂಜಿನಿಯರಿಂಗ್ ಕಾಲೇಜ್ ಪ್ರಾರಂಭ ಮಾಡುವಾಗ ಭೂಮಿ ಖರೀದಿಗೂ ಹಣ ಇರಲಿಲ್ಲ. ಆಗ ವೈಯಕ್ತಿಕ ಗ್ಯಾರಂಟಿ ಕೊಟ್ಟು 2 ಕೋಟಿ ರೂ.ಸಾಂಗ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆಯಬೇಕಾಯಿತು.

1986 ರಲ್ಲಿ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ.ಸಾಲ ಪಡೆಯಬೇಕಾಯಿತು. ಅದಕ್ಕೂ ನಮ್ಮ ತಂದೆ ವೈಯಕ್ತಿಕ ಗ್ಯಾರಂಟಿ ನೀಡಿ ಸಾಲ ತೆಗೆದರು. ಇಷ್ಟೆಲ್ಲ ಮಾಡಿ ನಮ್ಮ ತಂದೆ ಮಾಡಿದ್ದರಿಂದಲೇ ಇಂದು ಬಿಎಲ್‌ಡಿಇ ಸಂಸ್ಥೆ ರಾಷ್ಟ್ರೀಯ ರ‌್ಯಾಂಕಿಗ್ ಪಡೆಯಲು ಸಾಧ್ಯವಾಯಿತು ಎಂದರು.

ಅರಿತು ಮಾತನಾಡಿ:

ಭೀಮಾಶಂಕರ ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡಲು ನನಗೂ ಬರುತ್ತೆ. ಭೀಮಾ ನದಿಯಲ್ಲಿ ಉಸುಕಿನ ವ್ಯವಹಾರ ಹೇಗೆ ನಡೆದಿದೆ ನನಗೆ ಗೊತ್ತಿದೆ. ಇನ್ನು ಜಗದ್ಗುರುಗಳ ಮೇಲೆ ಎಫ್‌ಐಆರ್ ಹಾಕಿದ್ದಾಗಿ ಮಾತನಾಡುವಾಗ ತಿಳಿದು ಮಾತನಾಡಬೇಕು. ಅದು ಕೆಲವು ಸ್ವಾಮೀಜಿಗಳು ನನ್ನ ಕ್ಷೇತ್ರದಲ್ಲಿ ಚುನಾವಣೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚುನಾವಣೆ ಆಯೋಗದವರು ನೋಟಿಸ್ ನೀಡಿದ್ದರು. ಆ ಸಮಸ್ಯೆ ಕೂಡ ನಾನೇ ಬಗೆ ಹರಿಸಿದ್ದೇನೆ. ಅರಿತು ಮಾತನಾಡಿ ಎಂದರು.

ಲಿಂಗಾಯತ ವಿಷಯ:

ಲಿಂಗಾಯತ ಸ್ವತಂತ್ರ ಧರ್ಮದಿಂದ ಕಾಂಗ್ರೆಸ್‌ಗೆ ಹಿನ್ನೆಡೆ ಆಗಿದೆ ಎಂಬುದು ಸರಿಯಲ್ಲ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಆ ಚಳುವಳಿ ನಾನು ಹುಟ್ಟುಹಾಕಿದ್ದು ಅಲ್ಲ ಎಂದರಲ್ಲದೇ, ಲಿಂಗಾಯತ ಹೋರಾಟದಿಂದ ಲಾಭ ಆಗಿದೆಯೋ ನಷ್ಟ ಆಗಿದೆಯೋ ಸಮಗ್ರವಾಗಿ ತಿಳಿಸಿದ್ದೇನೆ. ಹೀಗಾಗಿ ನಿನ್ನ ಬೇಳೆ ಬೇಯಿಸಿಕೊಳ್ಳಲು ಮಾತನಾಡಿದರೆ ಅದರಿಂದೇನು ಆಗಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಏಕವಚನದಲ್ಲೇ ಪ್ರತಿಕ್ರಿಯಿಸಿದರು.

ಜಿಪಂ ಟಿಕೆಟ್ ಕೊಡಿಸಿದ್ದೇ ನಾನು:

ಈ ಪುಣ್ಯಾತ್ಮಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದೇ ನಾನು. ಮುಂದೆ ಅಧ್ಯಕ್ಷ ಮಾಡಿದ್ದೂ ನಾನು. 31 ಸದಸ್ಯರಲ್ಲಿ ಇವರನ್ನು 30 ಜನ ಅಧ್ಯಕ್ಷ ಮಾಡಬೇಡ ಎನ್ನುತ್ತಿದ್ದರು. ಬಸವರಾಜ ದೇಸಾಯಿ ಅವರನ್ನು ಇಳಿಸಿ ಇವರಿಗೆ ಅಧ್ಯಕ್ಷ ಮಾಡಿದೆ. 1999 ರಲ್ಲಿ ಇವರಿಗೆ ಟಿಕೆಟ್ ಸಿಕ್ಕಿಲ್ಲ ಎಂದು ತಿಕೋಟಾ ಮತಕ್ಷೇತ್ರದಲ್ಲಿ ಈತ ಏನೇನೆಲ್ಲಾ ಚಟುವಟಿಕೆ ಮಾಡಿದ್ದಾನೆಂದು ನನಗೆ ಗೊತ್ತಿದೆ. ಇನ್ನು ಈತನ ಒಳ ಒಪ್ಪಂದ ಯಾರ ಜೊತೆ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ಹೇಳಲು ನಾನು ಹೋಗಲ್ಲ ಎಂದರು.

ನೀರಾವರಿ ಖಾತೆಗೆ ವಿರೋಧ:

ನಾನು ಮಾಡಿದ ನೀರಾವರಿ ಯೋಜನೆಗಳ ಬಗ್ಗೆ ಜನಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಗೊತ್ತಿದೆ. ಈ ಮನುಷ್ಯ ಹೊಟ್ಟೆ ಉರಿಗೆ ಮಾತನಾಡಿದರೆ ಏನಾಗಲ್ಲ. ವಾಸ್ತವದಲ್ಲಿ ಇವರೆಲ್ಲ ನೀರಾವರಿ ಖಾತೆಗೆ ವಿರೋಧ ಮಾಡಿದವರು. ನಾನು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಖಾತೆ ತೆಗೆದುಕೊಂಡು ಬಂದಿದ್ದೇನೆ ವಿನಃ ಇವರ ಸಹಾಯ ತೆಗೆದುಕೊಂಡು ಮಂತ್ರಿಯಾಗಿಲ್ಲ ಎಂದರು.

ಎಂ.ಬಿ. ಪಾಟೀಲರನ್ನು ದಂಡಿಗೆ ಹಚ್ಚುತ್ತೇನೆ, ನೋಡಿಕೊಳ್ಳುತ್ತೇನೆ ಎಂದವರು ಮೊದಲು ಯಾವ ಪಾರ್ಟಿಯಿಂದ ದಂಡಿಗೆ ಹಚ್ಚುತ್ತಾರೆಂಬುದು ತಿಳಿಸಲಿ. ಬಸವಣ್ಙನಿಗೆ ನಾನೆಂದೂ ಹೋಲಿಸಿಕೊಂಡಿಲ್ಲ. ಬಸವಣ್ಣನನ್ನೇ ಬಿಟ್ಟಿಲ್ಲ ನಾ ಯಾವ ಗಿಡದ ತೊಪ್ಪಲು ಎಂದಿದ್ದೇನೆ ಎಂದು ಯಶವಂತರಾಯಗೌಡ ಪಾಟೀಲ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.