ಜಿಲ್ಲೆ

ರಣ ಭೀಕರ ಮಳೆಗೆ ತತ್ತರಿಸಿದ ನಗರ

ಕಲಬುರಗಿ: ದಶಕದಲ್ಲಿಯೇ ಕಂಡರಿಯದ ರಣ ಭೀಕರ ಮಳೆಗೆ ಕಲಬುರಗಿ ನಗರ ತತ್ತರಿಸಿದೆ. ಎಲ್ಲೆಡೆ ನೀರೇ ನೀರು, ಹೀಗಾಗಿ ಒಂದು ರೀತಿಯಲ್ಲಿ ಜಲಪ್ರಳಯದ ಅನುಭವ ಉಂಟಾಗಿತ್ತು. ವರುಣಾಘಾತ ಇಡೀ ನಗರದ ಜನ ಸಂಚಾರದ ಮೇಲೆ ನೇರ ಪರಿಣಾಮವನ್ನು ಬೀರಿತ್ತು.
ಸೋಮವಾರದಿಂದ ಸತತವಾಗಿದ್ದ ಮಳೆ ಮಂಗಳವಾರ ರಾತ್ರಿಯಿಂದ ಜೋರಾಗಿ ಸುರಿದು ಬುಧವಾರ ಬೆಳಗಿನವರೆಗೂ ಮುಂದುವರಿಯಿತು. ಹೀಗಾಗಿ ತಗ್ಗುಪ್ರದೇಶಗಳಿಗೆ ಹೊಕ್ಕ ನೀರು ಸಾವಿರಾರು ಮನೆಗಳಿಗೂ ನುಗ್ಗಿತು. ಜನತೆ ರಾತ್ರಿಯಿಡಿ ನೀರನ್ನು ಹೊರ ಹಾಕುವುದರಲ್ಲಿಯೇ ಸಮಯ ಕಳೆದರು.
ಕೆಲ ಕಡೆ ಚರಂಡಿ ನೀರು ನುಗ್ಗಿದ್ದರಿಂದ ಜನತೆ ಪರದಾಡಿದ್ದಲ್ಲದೇ ಮಹಾನಗರ ಪಾಲಿಕೆ ಮತ್ತು ಒಳಚರಂಡಿ ಮಂಡಳಿಗೆ ಹಿಡಿಶಾಪ ಹಾಕಿದರು. ಮೊದಲ ಬಾರಿಗೆ ಇಲ್ಲಿಯ ರೈಲು ನಿಲ್ದಾಣದೊಳಗೆ ನೀರು ಹೊಕ್ಕಿದ್ದವು. ನಂತರ ನೀರನ್ನು ಖಾಲಿ ಮಾಡಲಾಯಿತು. ಶಹಾಬಾದ್ ವೃತ್ತದಿಂದ ರಾಮ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯ ಮೇಲೆ ನೀರು ವೇಗವಾಗಿ ಹರಿಯುತ್ತಿರುವುದರಿಂದ ಕೆಲ ಗಂಟೆಗಳವರೆಗೆ ವಾಹನಗಳ ಓಡಾಟ ನಿಲ್ಲಿಸಲಾಗಿತ್ತು. ಹೀಗಾಗಿ ಒಂದು ನೂರಕ್ಕೂ ಹೆಚ್ಚು ಲಾರಿಗಳು ಮತ್ತಿತರ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು.
ನಗರದ ಲಾಲಗೇರಿ ವೃತ್ತ, ಸಿದ್ದಿಪಾಶಾ ದರ್ಗಾ , ಶಹಾಬಾದ ವೃತ್ತದಿಂದ ರಾಮಮಂದಿರಕ್ಕೆ ಹೋಗುವ ರಸ್ತೆ, ಕೋರಂಟಿ ಹನುಮಾನ ದೇವಸ್ಥಾನಕ್ಕೆ ಹೋಗುವ ಕೆಳ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರವನ್ನು ನಿಲ್ಲಿಸಲಾಗಿತ್ತು. ಕೋರಂಟಿ ಹನುಮಾನ ಬಳಿ ಇರುವ ವೃತ್ತದಲ್ಲಿ ಹತ್ತಾರು ವಾಹನಗಳನ್ನು ನಿಲ್ಲಿಸಲಾಗಿತ್ತು. ಪೆಟ್ರೋಲ್ಬಂಕ್ ನೀರಲ್ಲಿದ್ದುದ್ದು ಕಂಡು ಬಂದಿತು. ಅಲ್ಲದೇ ಎಲ್ಲ ಕಡೆ ಪೊಲೀಸ್ ವ್ಯವಸ್ಥೆಯನ್ನು ಮಾಡುವ ಮೂಲಕ ಜನರನ್ನು ರಕ್ಷಿಸಲಾಗುತ್ತಿತ್ತು.
ನಗರದ ಪೂಜಾ ಕಾಲನಿ, ವಿಭೂತಿ ನಗರ, ಯಮುನಾ ನಗರ, ವೆಂಕಟೇಶ ನಗರ, ಗೋದುತಾಯಿ ನಗರ, ಗಂಗಾ ನಗರ, ಕಣ್ಣಿ ಪ್ರದೇಶ, ಜನತಾ ಲೇಔಟ್, ಸುಂದರ ನಗರ, ಮಹಾಲಕ್ಷ್ಮೀ ನಗರ, ಪಂಚಶೀಲ ನಗರ, ಕೋಟನೂರು (ಡಿ) ಜಿಡಿಎ ಬಡಾವಣೆ, ಧನಲಕ್ಷ್ಮೀ ಲೇಔಟ್, ಸಜ್ಜನ್ ಲೇಔಟ್, ಹನಮಂತ ನಗರ, ಕುಬೇರ ನಗರ ಸೇರಿ ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಸಾಕಷ್ಟು ಪ್ರಮಾಣದ ಆಸ್ತಿ ಹಾನಿಯಾಗಿದೆ.
ಇನ್ನು ಪ್ರಮುಖ ರಸ್ತೆಗಳಲ್ಲಿದ್ದ ನೀರೂ ಸಹ ಅನೇಕ ವಾಣಿಜ್ಯ ಮಳಿಗೆಗಳಿಗೆ ನುಗ್ಗಿದ್ದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಅನೇಕರ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನೀರಲ್ಲಿ ತೊಯ್ದು ಹೋಗಿವೆ. ಇನ್ನು ಕೆಲವು ಹೋಟಲ್ಗಳಿಗೂ ನೀರು ನುಗ್ಗಿದ್ದು ಕಂಡು ಬಂದಿತು. ಚಿಕ್ಕ-ಪುಟ್ಟ ವ್ಯಾಪಾರಿಗಳಂತೂ ತಮ್ಮ ವ್ಯಾಪಾರವನ್ನೇ ಬಂದ್ ಮಾಡಿದ್ದರು.
ರಿಂಗ್ರೋಡ್ನಲ್ಲಿ ನೀರು ತುಂಬಿ ಹರಿಯುತ್ತಿದೆ. ಪಿಡಿಎ ಇಂಜಿನಿಯರಿಂಗ್ ಕಾಲೇಜಿನಿಂದ ಕೋರಂಟಿ ಹನುಮಾನ ದೇವಸ್ಥಾನದ ರಸ್ತೆಗೆ ಹೋಗುವ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ವಾಹನಗಳ ಓಡಾಟದ ಸ್ಥಳವನ್ನು ಬದಲಿಸಲಾಗಿತ್ತು. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಚರಂಡಿಗಳು, ಉದ್ಯಾನಗಳು ನೀರಲ್ಲಿವೆ.
ಕೆಲವು ದೇವಸ್ಥಾನಗಳಿಗೂ ಸಹ ನೀರು ಹೊಕ್ಕಿದ್ದರಿಂದ ದರ್ಶನವನ್ನು ನಿಲ್ಲಿಸಲಾಗಿತ್ತು. ಇಲ್ಲಿಯ ಜನತಾ ಲೇಔಟ್ನಲ್ಲಿರುವ ಅಂಬಾಭವಾನಿ ದೇವಸ್ಥಾನದೊಳಗೆ ನೀರು ಹೊಕ್ಕಿತ್ತು ಎನ್ನಲಾಗಿದೆ. ನಗರದ ಹೊರ ವಲಯದ ಉದನೂರು ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮದ ಕೆಲ ಮನೆಗಳು ಮತ್ತು ಶಾಲೆಗೆ ನೀರು ನುಗ್ಗಿದೆ.

ಕಳೆದ ರಾತ್ರಿ ಸುರಿದ ಮಳೆಯಿಂದ ಸುಂದರ ನಗರದ ಅನೇಕ ಮನೆಗಳಿಗೆ ನೀರು ಹೊಕ್ಕಿದೆ. ಮಹಾನಗರ ಪಾಲಿಕೆಯವರಿಗೆ ಈ ಕುರಿತಂತೆ ಮಾಹಿತಿ ನೀಡಲಾಯಿತು. ಆದರೆ ಅವರು ತಕ್ಷಣಕ್ಕೆ ಸ್ಪಂದಿಸಲೇ ಇಲ್ಲ. ರಾತ್ರಿಯಿಡಿ ನಾವು ನಮ್ಮ ಮನೆಗಳಿಂದ ನೀರನ್ನು ಹೊರಗಡೆ ಹಾಕುವುದರಲ್ಲಿಯೇ ಸಮಯ ಕಳೆದೆವಾದರೂ ನೀರು ಹರಿದು ಬರುತ್ತಲೇ ಇತ್ತು.

| ನಾರಾಯಣ ಜೋಶಿ, ಸುಂದರ ನಗರ ನಿವಾಸಿ ಕಲಬುರಗಿ

ಕಲಬುರಗಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್​
ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಲಬುರಗಿ ಜಿಲ್ಲೆಯಲ್ಲಿ ಅ.13 ರಿಂದ 16ವರೆಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿ, ರೆಡ್ ಅಲರ್ಟ್​ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿ ದಂಡೆಯಲ್ಲಿ ಹಳ್ಳಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸಹ ಹೆಚ್ಚಿನ ಮಳೆಯಾಗವ ಸಂಭವವಿರುವುದರಿಂದ, ಈಗಾಗಲೇ 1.02 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿದೆ, ಹೀಗಾಗಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ಜಿಲ್ಲೆಯ ಎಲ್ಲ ಜಲಾಶಯಗಳಿಗೆ ಒಳ ನೀರಿನ ಹರಿವು ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನೀರು ನದಿಗೆ ಹರಿಬಿಡಲಾಗುತ್ತಿದೆ. ಯಾವುದೇ ತುತರ್ು ಸಂಪರ್ಕಕ್ಕಾಗಿ ಜಿಲ್ಲಾಧಿಕಾರಿ ಕಾಯರ್ಾಲಯದ ಸಹಾಯವಾಣಿ ಸಂಖ್ಯೆ: 1077, ದೂರವಾಣಿ ಸಂಖ್ಯೆ: 08472-278677, 9448557713 ಹಾಗೂ 8951222125 ಗೆ ಸಂಪಕರ್ಿಸುವಂತೆ ಡಿ.ಸಿ ತಿಳಿಸಿದ್ದಾರೆ.