ದಾವಣಗೆರೆ: ಬೇಸಿಗೆ ರಜೆ ಮುಗಿಸಿದ ಚಿಣ್ಣರು ಮರಳಿ ಶಾಲೆಗಳತ್ತ ಮುಖ ಮಾಡುವ ಕ್ಷಣಗಣನೆ ಎದುರಾಗಿದೆ. ವಿದ್ಯಾದೇಗುಲಗಳ ಪುನರಾರಂಭಕ್ಕೆ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ, ಎರಡು ಕೇಂದ್ರೀಯ ಶಾಲೆಗಳಲ್ಲೂ ಸಿದ್ಧತೆ ನಡೆದಿದೆ.
ಜಿಲ್ಲೆಯಲ್ಲಿ ಒಟ್ಟು 2026 ಶಾಲೆಗಳಿವೆ. ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಸೇರಿದಂತೆ 1517 ಪ್ರಾಥಮಿಕ, 509 ಪ್ರೌಢಶಾಲೆಗಳಿವೆ. ಮೇ 29ರಿಂದ ಶಾಲೆಗಳ ಬಾಗಿಲು ತೆರೆದರೂ ಮಕ್ಕಳು ಬರುವಿಕೆ ಕೊರತೆ ಸಾಧ್ಯತೆ ಹಿನ್ನೆಲೆಯಲ್ಲಿ ಮೇ 31ರಿಂದ ಅಧಿಕೃತ ಶಾಲಾರಂಭೋತ್ಸವ ನಡೆಯಲಿದೆ. ಅಂದು ಮಕ್ಕಳಿಗೆ ಸಿಹಿಯೂಟ ಸಿದ್ಧವಾಗಲಿದೆ.
ಈಗಾಗಲೆ ಮುಖ್ಯ ಶಿಕ್ಷಕರ ಸಭೆ ನಡೆಸಿ ಅಡುಗೆ ಕೋಣೆ, ಶೌಚಗೃಹ, ತರಗತಿಗಳ ಸ್ವಚ್ಛತೆ ಆದ್ಯತೆ ನೀಡಲಾಗಿದೆ. ಬಿಸಿಯೂಟಕ್ಕೆ ಅಗತ್ಯವಾದ ಪಾತ್ರೆ, ಸರಂಜಾಮು, ಅಡುಗೆ ಸಿಲಿಂಡರ್ ವ್ಯವಸ್ಥೆ, ಧಾನ್ಯಗಳನ್ನು ಒಣಗಿಸುವ ಪ್ರಕ್ರಿಯೆ ನಡೆದಿದೆ. ಅಕ್ಕಿ ಸರಬರಾಜು ಆಗುತ್ತಿದೆ. ಹಾಲಿನಪುಡಿ ಪ್ಯಾಕೆಟ್‌ಗಳು ಭಾನುವಾರ ಕೂಡ ಕೆಲ ಕೇಂದ್ರಗಳಿಗೆ ತಲುಪಿವೆ. ತಳಿರು-ತೋರಣ ಇತರೆ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಮಕ್ಕಳಿಗೆ 15,54,316 ಪಠ್ಯಪುಸ್ತಕಗಳನ್ನು ವಿತರಿಸಬೇಕಿದೆ. ಇದರಲ್ಲಿ ಉಚಿತ ವಿತರಣೆಯ 11,18,303 ಹಾಗೂ ಮಾರಾಟದ 4,36.013 ಪುಸ್ತಕಗಳಿದ್ದು ಆಯಾ ಬಿಇಒಗಳಿಗೆ ತಲುಪಿದೆ. ಮೇ 31ರಂದು ಶಾಲೆಗಳಲ್ಲಿ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಹಾಗೂ ಸಿಹಿ ಭಕ್ಷೃದೊಂದಿಗೆ ಮಕ್ಕಳಿಗೆ ಅದ್ದೂರಿ ಸ್ವಾಗತ ನೀಡಲಾಗುವುದು ಎನ್ನುತ್ತಾರೆ ಡಿಡಿಪಿಐ ಜಿ.ಆರ್. ತಿಪ್ಪೇಸ್ವಾಮಿ.
--