ಮುಂಡಗೋಡ: ಮಳೆಗಾಲದ ಈ ಸಂದರ್ಭದಲ್ಲಿ ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರದ ರಜಾ ದಿನಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಶನಿವಾರ ಸಂಜೆ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು,
ಮಳೆಗಾಲದ ಈ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ಗೆ ಸೂಚಿಸಿದರು.
ಸನವಳ್ಳಿ ಜಲಾಶಯದ ಉಬ್ಬು ಹೋಗುವ ನೀರು ಬ್ಲಾಕ್ ಆಗಿದ್ದು, ಇದರಿಂದ ಜಲಾಶಯಕ್ಕೆ ತೊಂದರೆ ಆಗುತ್ತದೆ ಎಂದು ಸನವಳ್ಳಿ ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು. ಸಚಿವರು ಅಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ಆದಷ್ಟು ಬೇಗ ಸರಿ ಪಡಿಸುವಂತೆ ತಿಳಿಸಿದರು. ಗಾಂಧಿ ನಗರದ ಕೆಜೆಪಿ ಸಮಸ್ಯೆ ಬಗ್ಗೆ ಆ ಬಡಾವಣೆಯ ಮುಖಂಡರು ಸಚಿವರ ಗಮನಕ್ಕೆ ತಂದರು. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದರು. ನಂತರ ಬಾಚಣಕಿ ಜಲಾಶಯ ಮತ್ತು ಪ್ರವಾಸಿ ಮಂದಿರದ ಕಾಮಗಾರಿ ವೀಕ್ಷಿಸಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯದ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಎಂದು ಮುಖಂಡರು ದೂರಿದರು. ಕೊಪ್ಪ ಗ್ರಾಮದ ಹೀರೆ ಕೆರೆಯ ಹತ್ತಿರ ಇರುವ ರಸ್ತೆ ಕುಸಿದಿರುವ ಸ್ಥಳ ವೀಕ್ಷಣೆ ಮಾಡಿದರು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಮಹೇಶ ಇತರರಿದ್ದರು.