ಜಿಲ್ಲೆ

ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಳ್ಳಾರಿಯಲ್ಲಿ ಸಂಡೂರು ತಾಲೂಕಿನ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿ ಕೆಐಒಸಿಎಲ್​ಗೆ ನೀಡಬೇಕಾದ ಗುತ್ತಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಭೂಮಿ ನೀಡುವ ಕ್ರಮವನ್ನು ರಾಜ್ಯ ಅರಣ್ಯ ಇಲಾಖೆ ಸಚಿವರು ಅಮಾನತ್ತಿನಲ್ಲಿ ಇಟ್ಟಿರುವುದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್​.ಆರ್​. ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿನ ಗಣಿಗಾರಿಕೆಯನ್ನು ಕೆಐಒಸಿಎಲ್​ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಕಂಪನಿಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ 2 ದಶಕಗಳ ಹಿಂದೆ ಗಣಿಗಾರಿಕೆ ನಿಷೇಧಿಸಿ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಆದಾಗ್ಯೂ ಗುತ್ತಿಗೆ ನೀಡಲಾಗುತ್ತಿದೆ. ಜತೆಗೆ ವಿಶ್ವೇಶ್ವರಯ್ಯ ಐರನ್​ ಆ್ಯಂಡ್​ ಸ್ಟೀಲ್​ ಕಂಪನಿಗೆ ಗುತ್ತಿಗೆ ನೀಡುವುದನ್ನು ರದ್ದುಪಡಿಸಲು ಸಂಸ್ಥೆ ವತಿಯಿಂದ ಮುಖ್ಯಮಂತ್ರಿ, ಕಾನೂನು ಹಾಗೂ ಅರಣ್ಯ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಪರಿಗಣಿಸಿದ ಅರಣ್ಯ ಇಲಾಖೆ ಸಚಿವರು, ಗಣಿಗಾರಿಕೆ ಗುತ್ತಿಗೆ ನೀಡುವ ಕ್ರಮಕ್ಕೆ ತಡೆ ನೀಡಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಿದ್ದರೂ ಆ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಸಮಾಜ ಪರಿವರ್ತನ ಸಮುದಾಯ ಹಾಗೂ ಸಮಾನ ಮನಸ್ಕ ಸಂಘಗಳು ಓವರ್​ ಸೈಟ್​ ಅಥಾರಿಟಿ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಅವರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಎಚ್​ಡಿಕೆ ಜತೆ ಚರ್ಚೆಗೆ ಸಿದ್ಧಗಣಿಗಾರಿಕೆಗೆ ಸಹಿ ಮಾಡಿರುವ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಜತೆಗೆ ಚಚಿರ್ಸಲು ನಾನು ಸಿದ್ಧ. ನಮ್ಮ ದಾಖಲೆ ಸರಿ ಇದ್ದರೆ ನಾವು ಎಲ್ಲಿಗೆ ಬೇಕಾದರೂ ಬಂದು ಚಚಿರ್ಸುತ್ತೇವೆ. ಅವರೂ ಬಹಿರಂಗ ಚರ್ಚೆಗೆ ಬರಲಿ. ಕುಮಾರಸ್ವಾಮಿ ತಂದೆ ಪಿಎಂ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದವರು. ಎಚ್​ಡಿಕೆ ಈಗ ಕೇಂದ್ರ ಸಚಿವರು. ಇವರು ರಾಜ್ಯದ ಗೋಮಾಳ ಜಮೀನು ಬಿಟ್ಟು ಕೊಡಲಿ. ನ್ಯಾಯಾಲಯ ಈಗಾಗಲೇ ನಮ್ಮ ಪರ ಆದೇಶ ನೀಡಿದೆ. ಗಣಿಗಾರಿಕೆಯಿಂದ ಸಾಕಷ್ಟು ಪರಿಸರ ಹಾನಿ ಆಗಲಿದೆ. ಅಲ್ಲದೆ ಮನುಕುಲಕ್ಕೆ ದೊಡ್ಡ ಮಾರಕ. ಬೇಕಾದರೆ ನಾನು ಕುಮಾರಸ್ವಾಮಿಗೆ ದಾಖಲೆ ಕೊಡುತ್ತೇನೆ ಎಂದು ಹಿರೇಮಠ ಹೇಳಿದರು.