ಜಿಲ್ಲೆ

ತಡಕೋಡ ಗ್ರಾಮದ ವಿವೇಕಾನಂದ ಶಕ್ತಿ ಕೇಂದ್ರದ ರಜತ ಮಹೋತ್ಸವ ನಾಳೆ

ಧಾರವಾಡ: ತಾಲೂಕಿನ ತಡಕೋಡ ಗ್ರಾಮದಲ್ಲಿ ನೂತನವಾಗಿ ನಿರ್ವಿುಸುವ ರಾಮಕೃಷ್ಣ ಪರಮಹಂಸ ಮಂದಿರದ ಶಿಲಾನ್ಯಾಸ, ವಿವೇಕಾನಂದ ಶಕ್ತಿ ಕೇಂದ್ರದ ರಜತ ಮಹೋತ್ಸವ ಹಾಗೂ ವಿವೇಕಾನಂದ ವಿದ್ಯಾಮಂದಿರ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಫೆ. 18ರಂದು ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದ ಮಹಾರಾಜ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ರಾಮಕೃಷ್ಣ ಮಠ-ಮಿಶನ್ ಉಪಾಧ್ಯಕ್ಷ ಸ್ವಾಮಿ ಗೌತಮಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಶಾಲಾ ಕಟ್ಟಡ ಉದ್ಘಾಟಿಸುವರು. ಮಾಜಿ ಶಾಸಕ ಅಯ್ಯಪ್ಪ ದೇಸಾಯಿ, ರಘುವೀರಾನಂದ ಮಹಾರಾಜ್, ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ವಿಜಯಾನಂದ ಮಹಾರಾಜ್, ಪ್ರಕಾಶಾನಂದ ಮಹಾರಾಜ್, ಸುಮೇಧಾನಂದ ಮಹಾರಾಜ್, ಜ್ಯೋತಿರ್ಮಯಾನಂದ ಮಹಾರಾಜ್, ಜಗನ್ನಾಥಾನಂದ ಮಹಾರಾಜ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ನಂತರ 9.40ಕ್ಕೆ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ಮಂದಿರದ ಶಿಲಾನ್ಯಾಸ, 10.30ಕ್ಕೆ ವಿವೇಕಾನಂದ ಶಕ್ತಿ ಕೇಂದ್ರದ ರಜತ ಮಹೋತ್ಸವ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ ಮತ್ತು ಕುಂಕುಮಾರ್ಚನೆ, ಸಂಜೆ 6.30ಕ್ಕೆ ಬೆಳಗಾವಿಯ ಶಾಂತಲಾ ನಾಟ್ಯಾಲಯದ ಸದಸ್ಯರಿಂದ, ರೇಖಾ ಹೆಗಡೆ ನಿರ್ದೇಶನದ ಶ್ರೀ ರಾಮಕೃಷ್ಣ ಚರಿತಂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಮೋಹನ ರಾಮದುರ್ಗ, ವಿಜಯಕುಮಾರ ಕರಿಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.