ಜಿಲ್ಲೆ

ರಂಗ ಕಲೆ ಜೀವನ ಕಲೆ ಕಲಿಸುವ ಮಾಧ್ಯಮ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಟಕಗಳು ಜೀವನ ಕಲೆ ಕಲಿಸುವ ಪ್ರಬಲ ಮಾಧ್ಯಮ. ಅದು ಮನುಷ್ಯನ ಮನಸ್ಸಿನ ಕಲ್ಮಶ ಕಳೆದು ಚಿತ್ತಶುದ್ಧಿ ಮಾಡುವ ದೃಶ್ಯಕಾವ್ಯ ಎಂದು ಜೆಎಸ್‌ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸಂಪಿಗೆ ತೋಂಟದಾರ್ಯ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ್ದ ಉಪನ್ಯಾಸ ಹಾಗೂ ರಂಗಗೀತೆ ಕಾರ‌್ಯಕ್ರಮದಲ್ಲಿ ರಂಗಭೂಮಿ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು.
ರಂಗ ಕಲೆಗೆ ಜಗತ್ತಿನ ಎಲ್ಲ ದೇಶಗಳಲ್ಲಿ ತನ್ನದೇ ಆದ ಗೌರವ ಸ್ಥಾನವಿದೆ. ಇದು ನಾಗರಿಕತೆ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಜಗತ್ತಿನ ಮಹಾನ್ ದಾರ್ಶನಿಕರು, ಮುತ್ಸದಿಗಳೂ ರಂಗಭೂಮಿಯಿಂದ ಪ್ರಭಾವಿತರಾಗಿದ್ದಾರೆ. ರಂಗಕಲೆ ಭಾಷೆ ಸಂಸ್ಕೃತಿ ಮೀರಿದ ಕಲೆಯಾಗಿದೆ. ಕ್ರಿ.ಶ. 1045ರಲ್ಲಿ ಶಾಸನದಲ್ಲಿ ನಾಟ್ಯ ಕಾವ್ಯದಲ್ಲಿ ಪ್ರಸ್ತಾಪವಿದೆ. ರಂಗಭೂಮಿಗೆ ಮೂಲ ಜಾನಪದ ರಂಗಭೂಮಿಯಾಗಿದೆ. ಇಂದಿಗೂ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಜನರಿಗೆ ಮನರಂಜನೆ, ಶಿಕ್ಷಣ ಹಾಗೂ ಸ್ಫೂರ್ತಿ ನೀಡುತ್ತಿರುವುದು ಅಭಿನಂದನೀಯ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಗಾಯಕ ರಾಘವ ಕಮ್ಮಾರ ರಂಗಗೀತೆ ಪ್ರಸ್ತುತಪಡಿಸಿದರು. ಶಂಕರ ಕುಂಬಿ, ನಿಂಗಣ್ಣ ಕುಂಟಿ, ಜಿ.ಬಿ.ಹೊಂಬಳ, ಡಾ. ಪ್ರಕಾಶ ಗರುಡ, ಡಾ. ಶಶಿಧರ ನರೇಂದ್ರ, ಸುಮತಿ ದೇಸಾಯಿ, ಶಂಕರ ಮರೇದ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.