ಹೊಳೆನರಸೀಪುರದ ಬಯಲು ರಂಗಮಂದಿರದಲ್ಲಿ ಆರ್‌ಎಸ್‌ಎಸ್ ಶಾಖೆ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶಾಖಾ ಪ್ರಮುಖ್ ಮಹೇಶ್, ಬೌದ್ಧಿಕ ಪ್ರಮುಖ್ ನಾಗೇಂದ್ರ ಮತ್ತು ಸ್ವ್ವಯಂಸೇವಕರು ಭಾಗವಹಿಸಿದ್ದರು. 
ಜಿಲ್ಲೆ

ರಕ್ಷಾ ಬಂಧನ ಸಹೋದರತೆಯ ಸಂಕೇತ

ಹೊಳೆನರಸೀಪುರ: ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ಸ್ನೇಹ ಮತ್ತು ಸಹೋದರತೆಯ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ ) ಶಾಖಾ ಪ್ರಮುಖ್ ಮಹೇಶ್ ಹೇಳಿದರು.

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹೋದರಿಯರು ತಮ್ಮ ಸಹೋದರರಿಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಸಹೋದರರು ಈ ಸಂದರ್ಭ ಸಹೋದರಿಯರ ರಕ್ಷಣೆಗಾಗಿ ಸಂಕಲ್ಪ ಮಾಡುತ್ತಾರೆ. ಇಂತಹ ಮಹತ್ವದ ಹಾಗೂ ಪವಿತ್ರವಾದ ಸಂದೇಶ ಉಳ್ಳ ರಕ್ಷಾಬಂಧನ ಆಚರಣೆಯನ್ನು ಎಲ್ಲರೂ ಸಂಭ್ರಮಿಸೋಣ ಎಂದರು.

ಸಂಘದ ಬೌದ್ಧಿಕ ಪ್ರಮುಖ್ ನಾಗೇಂದ್ರ ಮಾತನಾಡಿ, ಮಹಾಭಾರತದಲ್ಲಿ ಶ್ರೀ ಕೃಷ್ಣದ್ರೌಪದಿಯನ್ನು ಸಹೋದರಿಯಾಗಿ ಸ್ವೀಕರಿಸಿ ಆಕೆಯನ್ನು ರಕ್ಷಿಸುವ ಭರವಸೆ ನೀಡಿದ್ದ. ಅದರಂತೆ ಆತ ನಡೆದುಕೊಂಡದ್ದು ನಮಗೆ ಮಾದರಿಯಾಗಬೇಕು ಎಂದರು. ಹಿಂದು ಸಂಸ್ಕೃತಿಯಲ್ಲಿ ರಾಖಿ ಎಂಬುದು ಬಾಂಧವ್ಯದೊಂದಿಗೆ ರಾಷ್ಟ್ರ ರಕ್ಷಣೆಯ ಸಂಕೇತವೂ ಆಗಿದೆ ಎಂದರು. ನಿವೃತ್ತ ಯೋಧ ವಸಂತ ಕುಮಾರ, ಮುಖಂಡರಾದ ಮುತ್ತುರಾಜ್, ದಯಾನಂದ, ಆದಿ ಚಂದನ್, ವೈಭವ್, ಬಾಲಾಜಿ, ಮಿಥುನ್ ಮತ್ತು ಸ್ವಯಂ ಸೇವಕರು ಇದ್ದರು.