ಹಾಸನ: ಜೀವ ರಕ್ಷಕ ಕಲೆಯ ಜ್ಞಾನ ಮತ್ತು ಮೌಲ್ಯದ ಶಿಕ್ಷಣ ಕೊಡುವ ನೇರವಾದ ಏಕೈಕ ಸಂಸ್ಥೆ ಸ್ಕೌಟ್ಸ್ ಆಂಡ್ ಗೈಡ್ಸ್ ಎಂದು ಹಾಸನ ಜಿಲ್ಲಾ ರೋವರ್ ಮತ್ತು ರೇಂಜರ್ ವಿಭಾಗದ ಕೇಂದ್ರ ಸ್ಥಾನಿಕ ಆಯುಕ್ತರಾದ ಡಾ. ಜಿ.ಡಿ. ನಾರಾಯಣ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ತುರ್ತು ಸಮಯದಲ್ಲಿ ಬದುಕುಳಿಯುವ ಕೌಶಲಗಳ ಕುರಿತ ಒಂದು ದಿನದ ರಾಜ್ಯಮಟ್ಟದ ಶಿಬಿರದಲ್ಲಿ ಮಾತನಾಡಿದ ಅವರು ಸೇವೆ ಮತ್ತು ಶಿಸ್ತು ಎರಡನ್ನು ನಾವು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಾಣುತ್ತೇವೆ. ಆಧುನಿಕ ಜಗತ್ತಿನಲ್ಲಿ ಇಂದು ಅಪಘಾತ ಸಂಭವಿಸಿದಾಗ ಸಾರ್ವಜನಿಕರು ಛಾಯಾಚಿತ್ರ ತೆಗೆಯುವುದಕ್ಕೆ ಮುಂದಾಗುತ್ತಾರೆ. ಜೀವ ಉಳಿಸುವುದಕಲ್ಲ. ಅದು ತಪ್ಪು. ಮೊದಲು ಜೀವ ಉಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಭೂಮಿಯ ಋಣವನ್ನು ತೀರಿಸಬೇಕಾದದ್ದು ನಮ್ಮ ಧರ್ಮ. ಜೀವ ರಕ್ಷಕ ಕಲೆಯನ್ನು ನಮ್ಮಲ್ಲಿರುವ ಜ್ಞಾನವನ್ನು ಉಪಯೋಗಿಸಿಕೊಂಡು ಮಾಡಬೇಕಾಗುತ್ತದೆ. ಅಪಾಯದ ಅಳಿವಿನಲ್ಲಿ ಇರುವ ಜೀವಗಳನ್ನು ರಕ್ಷಣೆ ಮಾಡುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಸೇವಾ ಭಾವನೆ ಮತ್ತು ಶಿಸ್ತಿನ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬುದರ ಅರಿವು ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಲ್ಲಿರುತ್ತದೆ. ವಿದ್ಯೆ ಜತೆಗೆ ಕೌಶಲ ಪ್ರಸ್ತುತ ಜಗತ್ತಿಗೆ ಬಹಳ ಅವಶ್ಯಕವಾಗಿದೆ ಎಂದು ಹೇಳಿದರಲ್ಲದೆ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಜಾಗೃತಿ ಮತ್ತು ಮಹತ್ವ ಉಪಯೋಗವನ್ನು ತಿಳಿಸಿದರು.
ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ಸ್ಕೌಟ್ಸ್ ಆಂಡ್ ಗೈಡ್ಸ್, ರೋವರ್ಸ್ ಮತ್ತು ರೇಂಜಸ್‌ಗಳು ಸೇವೆಯನ್ನು ಮರೆಯುವಂತಿಲ್ಲ. ಹಾಸನಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾಲೇಜಿನ ಸ್ಕೌಟ್ಸ್ ಆಂಡ್ ಗೈಡ್ಸ್ ಹಾಗೂ ರೋವರ್ಸ್ ಆಂಡ್ ರೇಂಜರ್ಸ್ ವಿದ್ಯಾರ್ಥಿಗಳು ಮಾಡಿದ ಸೇವೆಯನ್ನು ಜಿಲ್ಲಾಡಳಿತದ ಅಧಿಕಾರಿಗಳು, ಪತ್ರಕರ್ತರು ಸ್ಮರಿಸಿದ್ದನ್ನು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ಹರೀಶ್ ಮಾತನಾಡಿ, ಬದುಕುವ ಕೌಶಲದ ಜತೆಗೆ ಬದುಕಿಸುವ ಕೌಶಲಗಳನ್ನು ಕಲಿಯಬೇಕು. ಕೌಶಲಗಳನ್ನು ಕಲಿತರೆ ದೇಶದ ಆಸ್ತಿ ಆಗಬಹುದು. ಸಮಾಜದ ಜವಾಬ್ದಾರಿಯನ್ನು ವಹಿಸಿ ಕೊಳ್ಳುವಂತಹ ಮನೋಭಾವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಗಳಿಗೆ ಸೇವೆ ಎಂಬುದು ಪ್ರಧಾನವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಎಚ್.ಎಂ.ಪ್ರಿಯಾಂಕಾ, ಹಾಸನ ತಾಲೂಕು ಕಾರ್ಯದರ್ಶಿ ವನಜಾಕ್ಷಿ, ಪ್ರಾಧ್ಯಾಪಕರಾದ ಪ್ರೊ. ವೆಂಕಟನರಸಯ್ಯ , ಎಂ.ಪಿ. ಗೋಪಾಲ್, ಉಪನ್ಯಾಸಕರಾದ ಎ.ವಿ.ರಶ್ಮಿ, ಮಾಲತಿ, ಎಸ್. ರೇಖಾ, ಕಾಲೇಜಿನ ರೋವರ್ಸ್ ಲೀಡರ್ ಡಾ.ಸಿ.ಸುರೇಶ್, ರೋವರ್ ಲೀಡರ್ ಡಾ. ಪ್ರಮೀಳಾ ಉಪಸ್ಥಿತರಿದ್ದರು.