ಜಿಲ್ಲೆ

ರಕ್ಷಣಾ ಇಲಾಖೆ ಜಾಗದಲ್ಲಿ ಕಂಪೌಂಡ್ ನಿರ್ಮಾಣ ಇಲ್ಲ

ಹುಬ್ಬಳ್ಳಿ : ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಜಾಗದ ಸಮಸ್ಯೆ ಇತ್ಯರ್ಥದ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಬೆಂಗಳೂರಿನಲ್ಲಿ ಮಂಗಳವಾರ ರ್ಚಚಿಸಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇಲ್ಲಿನ ವಿಶ್ವೇಶ್ವರ ನಗರ, ರಾಜನಗರ, ಶಾಂತಿಕಾಲನಿಗೆ ಹೊಂದಿಕೊಂಡು ಮೂರು ಕಡೆಗಳಲ್ಲಿ ಇರುವ ರಕ್ಷಣಾ ಇಲಾಖೆಗೆ ಸೇರಿದ ಒಟ್ಟು 17 ಎಕರೆ ಜಾಗದ ಸುತ್ತಲೂ ಆವರಣ ಗೋಡೆ (ಕಂಪೌಂಡ್ ವಾಲ್) ನಿರ್ವಿುಸುವುದನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿವುದಾಗಿ ತಿಳಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ರಕ್ಷಣಾ ಇಲಾಖೆಗೆ ನಗರದ ಹೊರಭಾಗದಲ್ಲಿ ಪ್ರತ್ಯೇಕ ಜಾಗ ನೀಡುವುದಾದರೆ ಈ ಜಾಗವನ್ನು ಮಹಾನಗರ ಪಾಲಿಕೆ ಅಥವಾ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಸಿದ್ಧ. ಈ ಕುರಿತು ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.

ಈ ಜಾಗದಲ್ಲಿ ರಕ್ಷಣಾ ಇಲಾಖೆಯವರು ಆವರಣ ಗೋಡೆ ನಿರ್ವಿುಸಲು ಮುಂದಾಗಿದ್ದರಿಂದ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ ಶೆಟ್ಟರ್ ಅವರು ಮಂಗಳವಾರದಂದು ಈ ಜಾಗದ ಡ್ರೋಣ ಚಿತ್ರಗಳು ಹಾಗೂ ನಕಾಶೆಯೊಂದಿಗೆ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ, ಅಂದಾಜು ಅರ್ಧತಾಸಿನವರೆಗೆ ರ್ಚಚಿಸಿದ್ದಾರೆ.

ಈ ಜಾಗದಲ್ಲಿ ಆವರಣ ಗೋಡೆ ನಿರ್ವಿುಸಿದರೆ ಇಲ್ಲಿನ ಜನರಿಗೆ ಸುತ್ತಲಿನ ವಸತಿ ಪ್ರದೇಶಗಳ ಸಂಪರ್ಕ ಕಡಿತಗೊಳ್ಳುತ್ತದೆ. ಮಳೆಗಾಲದ ಸಂದರ್ಭದಲ್ಲಿ ನೃಪತುಂಗಬೆಟ್ಟದಿಂದ ನೈಸರ್ಗಿಕ ನೀರು ಇದೇ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ. ಗೋಡೆ ನಿರ್ವಿುಸಿದರೆ ನೀರು ಹರಿಯುವ ಮಾರ್ಗ ಸ್ಥಗಿತಗೊಳ್ಳುತ್ತದೆ. ಈ ಜಾಗದಲ್ಲಿ ಒಳಚರಂಡಿ ಪೈಪ್​ಗಳಿವೆ. ಅವುಗಳು ದುರಸ್ತಿಗೆ ಬಂದರೆ ರಿಪೇರಿ ಮಾಡುವಾಗ ಸಮಸ್ಯೆ ಎದುರಾಗುತ್ತದೆ. ಸುತ್ತಲೂ ಒಂದು ಸಾವಿರಕ್ಕೂ ಹೆಚ್ಚು ಜನವಸತಿ ಇದ್ದು, ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ. ರಾಜನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ಇದ್ದು, ಮೈದಾನಕ್ಕೆ ತೆರಳುವ ಮಾರ್ಗವೂ ಬಂದ್ ಆಗಲಿದೆ ಎಂದು ಶೆಟ್ಟರ್ ಇಲ್ಲಿನ ಸಮಸ್ಯೆ ಬಗ್ಗೆ ರಾಜನಾಥ ಸಿಂಗ್ ಅವರಿಗೆ ಮನದಟ್ಟು ಮಾಡಿದರು.

ಇಲ್ಲಿನ 17 ಎಕರೆ ಜಾಗವನ್ನು ರಾಜ್ಯ ಸರ್ಕಾರಕ್ಕೆ ಅಥವಾ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರೆ, ರಕ್ಷಣಾ ಇಲಾಖೆಗೆ ನಗರದ ಹೊರಭಾಗದಲ್ಲಿ ಪ್ರತ್ಯೇಕ 17 ಎಕರೆ ಜಾಗ ನೀಡಲು ಅವಕಾಶ ಇದೆ ಎಂಬುದನ್ನೂ ಶೆಟ್ಟರ್ ಹೇಳಿದರು. ಜಗದೀಶ ಶೆಟ್ಟರ್ ಮಾತಿಗೆ ಸಮ್ಮತಿ ಸೂಚಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.