ಜಿಲ್ಲೆ

ರಕ್ಷ ರಸಿಕರ ಮನೆಗೆದ್ದ ಚೈತ್ರ ಕೋಗಿಲೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ ಕಲಾ ಪ್ರಕಾರಗಳಿಗೆ ಹೆಸರುವಾಸಿಯಾಗಿದೆ. ಇದೀಗ ದಕ್ಷಿಣ ಕನ್ನಡ ಸಂಘದ ಮೂಲಕ ಯಕ್ಷಗಾನಕ್ಕೂ ಬೆಂಬಲ ವ್ಯಕ್ತವಾಗುತ್ತಿರುವುದು ಸಂತಸದ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಹೇಳಿದರು.
ದಕ್ಷಿಣ ಕನ್ನಡ ಸಂಘ, ವಸತಿ ಗೃಹಗಳ ಮಾಲೀಕರ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ವೆಂಕಟೇಶ ಯರಗೋಳ್ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಚೈತ್ರ ಕೋಗಿಲೆ ಯಕ್ಷ ಗಾನ ಪ್ರದರ್ಶನಕ್ಕೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಗಾನ ಮತ್ತು ನೃತ್ಯ ವೈಭವದ ಯಕ್ಷ ಗಾನವನ್ನು ಕಲ್ಯಾಣ ನಾಡಿನಲ್ಲಿ ಸಹೃದಯವರಿಗೆ ಉಣ ಬಡಿಸುವ ಸಂಘದ ಕೆಲಸ ಶ್ಲಾಘನೀಯ. ಈ ಭಾಗ ಭರತನಾಟ್ಯ, ಭಕ್ತಿ ಸಂಗೀತ, ಹಿಂದುಸ್ತಾನಿ ಸಂಗೀತ, ಗಜಲ್ ಪ್ರಕಾರಗಳಿಗೆ ಹೆಸರುವಾಸಿಯಾಗಿದ್ದರೂ ಅಪರೂಪದ ಯಕ್ಷಗಾನದಂತಹ ಕಲಾಮಾಧ್ಯಮಕ್ಕೆ ಸಹೃದಯರ ಕೊರತೆ ಇಲ್ಲ ಎಂಬುದು ಇಂದು ಸಾಬೀತಾಗಿದೆ ಎಂದರು.
ಉದ್ಯಮಿ ಮಹೇಶ ಯರಗೋಳ್, ಭಾಗವತರಾದ ರಾಘವೇಂದ್ರ ಮಯ್ಯ, ಹಿರಿಯ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ ಅವರನ್ನು ಉದ್ಯಮಿ ಜೀವನಕುಮಾರ್ ಜತ್ತನ್ ಗೌರವಿಸಿದರು. ಉದ್ಯಮಿ ಸತೀಶ ಗುತ್ತೇದಾರ್, ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ, ಶ್ರೀರಾಮ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ವಿದ್ಯಾಧರ ಭಟ್, ಪ್ರಶಾಂತ ಶೆಟ್ಟಿ ಇನ್ನಾ, ನರಸಿಂಹ ಮೆಂಡನ್, ಗಂಗಾಧರ ತಂತ್ರಿ ಇದ್ದರು. ಕಾರ್ಯದರ್ಶಿ ಪುರಂದರ ಭಟ್ ನಿರೂಪಿಸಿದರು. ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಶ್ರೀಕಾಂತ ಶಿರ್ಲಾಲು ವಂದಿಸಿದರು.