ಜಿಲ್ಲೆ

ರಕ್ತದಾನದಿಂದ ಮತ್ತೊಂದು ಜೀವ ರಕ್ಷಣೆ

ಚಾಮರಾಜನಗರ: ರಕ್ತದಾನ ಮಹತ್ತರವಾದ ಕೆಲಸವಾಗಿದ್ದು, ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಯುತ್ತದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಆವರಣದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಯುವಜನಾಂಗದಲ್ಲಿ ಹೆಚ್ಚಾಗುತ್ತಿರುವ ಅಪಘಾತ, ಹಲವಾರು ಆರೋಗ್ಯ ಸಮಸ್ಯೆಗಳು ಮತ್ತು ಹೆರಿಗೆ ಸಮಯದಲ್ಲಿ ಅಗತ್ಯವಾಗಿ ರಕ್ತದ ಅವಶ್ಯಕತೆ ಇರುತ್ತದೆ. ಕೆಲವು ಸಮಯದಲ್ಲಿ ರಕ್ತದ ಕೊರತೆ ಉಂಟಾಗುತ್ತಿದ್ದು, ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಂದು ಅಮೂಲ್ಯವಾದ ಜೀವವನ್ನು ಉಳಿಸಬಹುದಾಗಿದೆ. ಒಂದು ವ್ಯಕ್ತಿ ರಕ್ತದಾನ ಮಾಡಿದರೇ ಮೂರು ಜನರಿಗೆ ಅದರಿಂದ ಅನುಕೂಲವಾಗಲಿದೆ ರಕ್ತದಾನದಿಂದ ಆರೋಗ್ಯವಂತ ದೇಹವನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರರು ರಕ್ತದಾನ ಮಾಡಿರುವುದು ತುಂಬಾ ಉತ್ತಮ ವಿಚಾರವಾಗಿದೆ. ಇದಕ್ಕೆ ಕುಲಪತಿ ಪ್ರೋ.ಎಂ.ಆರ್.ಗಂಗಾಧರ್ ಅವರು ಉತ್ತಮ ಸಹಕಾರಿ ನೀಡಿದ್ದಾರೆ ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಪ್ರತಿವರ್ಷ ವಿಶ್ವವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬಂದಿದ್ದೇವೆ. ರಕ್ತದಾನ ಮಾಡುವುದರಿಂದ ಮತ್ತಷ್ಟು ಜೀವಿಗಳ ಉಳಿವಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲ ಸಚಿವರಾದ ಆರ್.ಲೋಕನಾಥ್, ಮೌಲ್ಯ ಮಾಪನ ವಿಭಾಗ ಕುಲಸಚಿವ ಜಿ.ವಿ.ವೆಂಕಟರಮಣ, ಸಿಮ್ಸ್ ಬಾಯಿ ಮತ್ತು ಹಲ್ಲು ವಿಭಾಗದ ಮುಖ್ಯಸ್ಥ ಡಾ.ವಾಜೀದ್, ಯೂತ್ ರೆಡ್ ಕ್ರಾಸ್ ಸಂಯೋಜಕಿ ಹಜೀರಾ, ಪ್ರಾಧ್ಯಾಪಕರಾದ ದಿವ್ಯಶ್ರೀ, ಕಾಮಿಲಾ, ಸವಿತಾ, ಶಶಿಕಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇತ್ತೀಚಿನ ದಿನಮಾನಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಕಡಿಮೆಯಾಗಿದೆ. ಆಗಾಗಿ ಇಂತಹ ಕಾರ್ಯಕ್ರಮಗಳ ಆಯೋಜನೆ ಹೆಚ್ಚಾಗಬೇಕು. ಯುವಸಮೂಹ ರಕ್ತದಾನ ಮಾಡುವುದರಿಂದ ಆರೋಗ್ಯಯುತವಾಗಿ ಇರಬಹುದಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ವಿಶ್ವವಿದ್ಯಾಲಯ ಮತ್ತು ಸಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಯಶಸ್ವಿಯಾಗಿ ರಕ್ತದಾನ ಶಿಬಿರ ನಡೆದಿದೆ. ಸುಮಾರು 20 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ರಕ್ತದಾನ ಮಾಡಿದ್ದಾರೆ.

-ಡಾ.ಆರ್.ಮಹೇಶ್ ಕೋಡಿಉಗನೆ, ಕಾರ್ಯಕ್ರಮ ಸಂಯೋಜನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆ, ಚಾಮರಾಜನಗರ ವಿಶ್ವವಿದ್ಯಾಲಯ