ಜಿಲ್ಲೆ

ರಕ್ತದಾನದಿಂದ ಜೀವರಕ್ಷಣೆಗೆ ಸಹಾಯ

ಚನ್ನರಾಯಪಟ್ಟಣ: ರಕ್ತದಾನ ಮಾಡುವ ಮೂಲಕ ಅಪಘಾತ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವವರನ್ನು ಕಾಪಾಡಲು ನೆರವಾಗಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವ ಹಾಗೂ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರದ ಗುರುವಂದನಾ ಕಾರ್ಯಕ್ರಮ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಪಘಾತ, ಶಸ್ತ್ರಚಿಕಿತ್ಸೆ, ಇನ್ನಿತರ ತುರ್ತು ಸಂದರ್ಭದಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾವು ಆಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ಆಸ್ಪತ್ರೆ ಹಾಗೂ ಶಿಬಿರಗಳಲ್ಲಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ಲಯನ್ಸ್ ಕ್ಲಬ್, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, 15 ದಿನಗಳಿಂದ ಯೋಗ ತರಬೇತಿ ಶಿಬಿರ ನಡೆಯುತ್ತಿದ್ದು, ಅನೇಕರು ಪ್ರಯೋಜನ ಪಡೆದಿದ್ದಾರೆ. ಯೋಗಾ ಹಾಗೂ ಧ್ಯಾನ ಆರೋಗ್ಯದ ಗುಟ್ಟು ಎಂದು ತಿಳಿಸಿದರು.

ಯೋಗ ಗುರು ಶ್ರೀ ಚೇತನ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಜಣ್ಣ, ಶಿವಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ್, ಹಾಸನ ರಕ್ತ ನಿಧಿ ಕೇಂದ್ರದ ಡಾ.ನಾಗಲಕ್ಷ್ಮೀ, ಗುರುಮೂರ್ತಿ, ಮಮತಾ, ನಾಗರಾಜ್, ವಾಸುದೇವ್, ಕನ್ನಡ ವೀರ ಸಮರ ಸೇನೆ ರಾಜ್ಯಾಧ್ಯಕ್ಷ ಭರತ್‌ಗೌಡ, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.