ಕೊಡಗು : ರಕ್ತದಾನ ಮಾಡುವುದರಿಂದ ಒಬ್ಬರ ಜೀವನ ಬೆಳಗಿಸಬಹುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಸೀನಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವಿಶ್ವ ವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತ ನಿಧಿ ಕೇಂದ್ರ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಕುಶಾಲನಗರದ ರೋಟರಿ, ಲಯನ್ಸ್ ಸಂಸ್ಥೆ ವತಿಯಿಂದ ಕುಶಾಲನಗರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿನ ಮಾನವಿಕ ಸಂಕೀರ್ಣದ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ಆಯೋಜನೆ ಮಾಡುವ ಅಗತ್ಯತೆ ಇದೆ. ಗರ್ಭಿಣಿಯರಿಗೆ ಪ್ರಸವ ಹಾಗೂ ಇನ್ನಿತರ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ದಾನಿಗಳು ರಕ್ತದಾನ ಮಾಡುವುದು ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದಾಗಿದೆ. ಕೊಡಗು ವಿವಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೈದ್ಯರನ್ನು ವಾರಕ್ಕೊಮ್ಮೆ ಲಭ್ಯವಾಗುವ ರೀತಿ ನಿಯೋಜನೆ ಮಾಡುವಂತೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಮಾತನಾಡಿ, ಪ್ರತಿ ವರ್ಷ ಜೂ.14 ರಂದು ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಹೆಚ್ಚೆಚ್ಚು ದಾನಿಗಳು ರಕ್ತದಾನ ಮಾಡಬೇಕು ಎಂದು ಕೋರಿದರು.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ತುರ್ತು ಪರಿಸ್ಥಿತಿ, ಅಪಘಾತಗಳ ಸಮಯದಲ್ಲಿ ರಕ್ತದ ತುರ್ತು ಅಗತ್ಯವಿರುತ್ತದೆ. ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಪ್ಲೇಟ್‌ಲೇಟ್ಸ್ ಈ ಎಲ್ಲ ಅಂಶಗಳನ್ನು ಬೇರ್ಪಡಿಸುವಿಕೆಗೆ ರಕ್ತವಿಧಳ ಘಟಕವಿದೆ. ತುರ್ತು ಸಂದರ್ಭಕ್ಕೆ ರಕ್ತದ ಅಗತ್ಯತೆ ಪೂರೈಸಲು ಸೋಮವಾರಪೇಟೆ ಮತ್ತು ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆ, ಕುಶಾಲನಗರ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ನಾಲ್ಕು ರಕ್ತ ಶೇಖರಣ ಘಟಕಗಳಿವೆ ಎಂದು ತಿಳಿಸಿದರು.
ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹೇಶ್ ಮಾತನಾಡಿ, ಆರೋಗ್ಯಕರ ಜೀವನ ನಡೆಸಲು ರಕ್ತ ಅತೀ ಅವಶ್ಯ. ಪ್ರತೀ ದಿನ ಅದೆಷ್ಟೋ ಜನರು ರಕ್ತದ ಕೊರತೆಯಿಂದ ಸಾವನಪ್ಪುತ್ತಿದ್ದಾರೆ. ಪ್ರತಿ ದಿನ ಹಲವರಿಗೆ ರಕ್ತದ ಆವಶ್ಯಕತೆಯಿರುತ್ತದೆ. ಶ್ರೇಷ್ಠ ದಾನಗಳಲ್ಲಿ ಒಂದಾಗಿ ರಕ್ತದಾನ ಪರಿಗಣಿಸಲಾಗಿದೆ. ಹಾಗಾಗಿ ಜನರಿಗೆ ರಕ್ತದ ಪ್ರಾಮುಖ್ಯ ತಿಳಿಸಲು, ರಕ್ತದಾನ ಮಾಡುವಂತೆ ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದರ ಜತೆಗೆ ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸಾಧಕರಾದ ಶರತ್‌ಕಾಂತ, ಮಣಿಕಂಠ, ಮಾರುತಿ ಪ್ರಸಾದ್, ಪ್ರತಿಷ್ಠಾ ಅವರಿಗೆ ಸನ್ಮಾನ ಮಾಡಲಾಯಿತು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ, ಕುಶಾಲನಗರದ ರೋಟರಿ ಸಂಸ್ಥೆ ಅಧ್ಯಕ್ಷ ಉಲ್ಲಾಸ್ ಕೃಷ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ, ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್, ಮೇಲ್ವಿಚಾರಕಿ ಸುನೀತಾ ಉಪನ್ಯಾಸಕ ಜಮೀರ್ ಅಹಮದ ಇತರರು ಇದ್ದರು. ಕೊಡಗು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಎಂಜಿಎಂ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.