ಹಾಸನ: ರಕ್ತವನ್ನು ದಾನ ಮಾಡುವುದರಿಂದ ರಕ್ತದ ಅವಶ್ಯಕತೆಯಿರುವ ಮೂರು ಜೀವಗಳನ್ನು ಉಳಿಸುವುದು ಒಂದೆಡೆಯಾದರೆ, ರಕ್ತದಾನದಿಂದ ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ ಎಂದು ಅಡಗೂರಿನ ಯೋಗ ಚೇತನ ಕೇಂದ್ರದ ಯೋಗ ಗುರು ಚೇತನ್ ಗುರೂಜಿ ಹೇಳಿದರು.
ನಗರದ ರಾಜೀವ್ ಸಮೂಹ ವಿದ್ಯಾ ಸಂಸ್ಥೆಗಳು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಆಕಾಶವಾಣಿ ಹಾಗೂ ಜೀವರಕ್ಷ ರಕ್ತ ನಿಧಿಯ ಸಹಯೋಗದೊಂದಿಗೆ ರಾಜೀವ್ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡಿದ ವ್ಯಕ್ತಿಗೆ ಪಾರ್ಶ್ವವಾಯು, ಹಾರ್ಟ್ ಅಟ್ಯಾಕ್ ನಂತರ ಸಮಸ್ಯೆಗಳು ಕಾಡುವುದಿಲ್ಲ. ರಕ್ತದಾನ ಮಾಡುವುದರಿಂದ ದೇಹವು ಪುನಶ್ಚೇತನಗೊಳ್ಳುತ್ತದೆ. ಆರೋಗ್ಯ ಹೆಚ್ಚಾಗುತ್ತದೆ. ದೇಹದ ರೋಗ ನಿರೋಧಕ ಪ್ರತಿಬಂಧಕ ಶಕ್ತಿ ವರ್ಧಿಸುತ್ತದೆ. ಯುವಜನರ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ವಿವರಿಸಿದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಬಿ.ಸಂಧ್ಯಾ ಮಾತನಾಡಿ, ರಕ್ತದ ಗುಂಪುಗಳನ್ನು ಕಂಡು ಹಿಡಿದ ಕಾರ್ಲ್ ಲ್ಯಾಂಡ್ ಸ್ಟೇನರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ರಕ್ತದಾನಿಗಳನ್ನು ಸನ್ಮಾನಿಸುವುದರ ಮುಖೇನ ಯುವ ಜನರಿಗೆ ರಕ್ತದಾನದ ಪ್ರೇರೇಪಣೆಯನ್ನು ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಆಕಾಶವಾಣಿಯ ಮುಖ್ಯಸ್ಥ ಡಾ. ವಿಜಯ ಅಂಗಡಿ ಮಾತನಾಡಿ, ಇಂದಿನ ಯುವ ಪೀಳಿಗೆ ಆಹಾರದ ಶಿಸ್ತುಕ್ರಮವನ್ನು ಅನುಸರಿಸದೇ ರಕ್ತಹೀನತೆಗೆ ತುತ್ತಾಗುತ್ತಿದ್ದಾರೆ. ಕಬ್ಬಿಣದ ಅಂಶ ಹೆಚ್ಚಿರುವ ರಾಗಿಯ ಜತೆಗೆ ನೈಸರ್ಗಿಕವಾಗಿ ದೊರೆಯುವ ಪೌಷ್ಠಿಕಾಂಶಯುಕ್ತ ಆಹಾರದ ಸೇವನೆ ಮಾಡಿ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ, ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ರಕ್ತದಾನಿಯಿಂದ ಮಾತ್ರ ರಕ್ತದ ಅವಶ್ಯಕತೆಯನ್ನು ಸರಿದೂಗಿಸಲು ಸಾಧ್ಯ. ಹಾಗಾಗಿ ಹೆಚ್ಚೆಚ್ಚು ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ 93 ಬಾರಿ ರಕ್ತದಾನ ಮಾಡಿರುವ ಚೇತನ್ ಗುರೂಜಿ ಅವರಿಗೆ ರಕ್ತದಾನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೀವರಕ್ಷ ರಕ್ತನಿಧಿಯ ಮೇಲ್ವಿಚಾರಕ ಮೋಹನ್, ರಾಜೀವ್ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ಎಸ್.ಎ.ನಿತಿನ್, ಡಾ. ಎಂ.ಆರ್. ಶಂಕರೇಗೌಡ, ಡಾ. ಕೆ.ಆರ್.ನಾಗೇಶ್, ಪ್ರೊ. ಸೆಲ್ವಿ, ಪ್ರೊ. ಸಲೋಮಿ, ಡಾ. ದಿನೇಶ್, ಡಾ. ಚೈತ್ರಾ, ಸತ್ಯಶ್ರೀ, ಸುಭಾಷಿನಿ ಉಪಸ್ಥಿತರಿದ್ದರು.