ಜಿಲ್ಲೆ

ರಕ್ತದಾನದಿಂದ ಆರೋಗ್ಯ ಉತ್ತಮ

ಅರಸೀಕೆರೆ: ನಿಯಮಿತವಾಗಿ ರಕ್ತದಾನ ಮಾಡುವುರಿಂದ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಸರ್ಕಾರಿ ಜೆ.ಸಿ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಹೇಳಿದರು.


ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ವರ್ಷದ ಸಂಸ್ಮರಣೆ ಅಂಗವಾಗಿ ತರಳಬಾಳು ಯುವ ವೇದಿಕೆಯಿಂದ ಜೆ.ಸಿ.ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.


ಎಲ್ಲ ದಾನಗಳಿಗಿಂತಲೂ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಪ್ರತಿಯೊಬ್ಬರೂ ಇಂತಹ ಮಹತ್ವದ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಮತ್ತೊಂದು ಜೀವಕ್ಕೆ ಆಸರೆ ನೀಡಿದಂತಾಗುತ್ತದೆ ಎಂದರು.


ಬಿಜೆಪಿ ತಾಲೂಕು ಉಪಾಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯಕುಮಾರ್ ಮಾತನಾಡಿ, ಸೆ.24 ರಂದು ಸಿರಿಗೆರೆಯಲ್ಲಿ ಶ್ರೀಗಳ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ತರಳಬಾಳು ಯುವ ವೇದಿಕೆ ಅಧ್ಯಕ್ಷ ಲಿಂಗರಾಜ್, ಫಿಸಿಯೋ ಮಧು, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಯಾದಾಪುರ ತೇಜಸ್, ಡಾ.ಷಡಕ್ಷರಿ ಇದ್ದರು. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.