ಹಾಸನ: ರಕ್ತದಾನದಂತಹ ಸಮಾಜಮುಖಿ ಕೆಲಸದಲ್ಲಿ ಆಸಕ್ತಿ ವಹಿಸಿ ಯುವಕರು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಹಿರಿಯ ನ್ಯಾಯಾಧೀಶ ಬಿ.ಕೆ.ರವಿಕಾಂತ್ ಕಿವಿಮಾತು ಹೇಳಿದರು.
ತಾಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ಮಾಡಲು ಮುಂದೆ ಬರಬೇಕು. ವಿದ್ಯಾರ್ಥಿಗಳು ಶಿಸ್ತಿನ ಜೀವನ ನಡೆಸಿ ದೊಡ್ಡ ಮಟ್ಟದ ಸಾಧನೆ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಎಚ್.ಪಿ ಮೋಹನ್ ಮಾತನಾಡಿ, ನಮ್ಮ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.1ರಷ್ಟು ಜನರು ಮಾತ್ರ ರಕ್ತದಾನ ಮಾಡುತ್ತಿದ್ದು ರಕ್ತದ ಕೊರತೆ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾದರೆ ದೇಶದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಸಾಧ್ಯ ಎಂದರು.
ಜಿಲ್ಲಾ ರೆಡ್ ಕ್ರಾಸ್ ನಿರ್ದೇಶಕ ಹಾಗೂ ವೈದ್ಯಾಧಿಕಾರಿ ಡಾ. ತೇಜಸ್ವಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ರಕ್ತದಾನ ಮಾಡಲು ಮುಂದೆ ಬಂದು ಅನೇಕ ಜೀವಗಳನ್ನು ಉಳಿಸಲು ಸಹಕರಿಸಿರುವ ನೀವುಗಳ ನಿಜ ಜೀವನದ ನಾಯಕ, ನಾಯಕಿಯರು ಎಂದು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ. ರಂಗಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಜಿ ಜಯೇಂದ್ರ ಕುಮಾರ್, ನಿರ್ದೇಶಕ ಅಮ್ಜದ್ ಖಾನ್, ಸಂಚಾಲಕ ಎಚ್.ಆರ್.ಹರ್ಷಿತ್, ಜಿಲ್ಲಾ ಸರ್ಕಾರಿ ಆಸ್ಪತ್ರೆ ರಕ್ತನಿಧಿ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮೀ, ಕಾಲೇಜಿನ ಯುವ ರೆಡ್ ಕ್ರಾಸ್ ಸಂಚಾಲಕ ಎಂ.ಜಿ. ಗುರುಬಸವಣ್ಣ ಮತ್ತು ಪ್ರಾದ್ಯಾಪಕರು ಇದ್ದರು.