ಜಿಲ್ಲೆ

ರಕ್ತದಾನದ ಮೂಲಕ ವೀರಯೋಧರಿಗೆ ನಮನ

ಹಾಸನ: ಭಾರತ-ಪಾಕಿಸ್ತಾನ ನಡುವಿನ ಇತ್ತೀಚಿನ ದಾಳಿಯಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಿ ರಕ್ತದಾನ ಮಾಡಿ ದೇಶಾಭಿಮಾನದ ಸಂದೇಶ ಸಾರಿದರು.
ಬಳಿಕ ಮಾತನಾಡಿದ ಅವರು, ಅನೇಕ ಸೈನಿಕರು ವೀರ ಮರಣ ಹೊಂದಿದ್ದಾರೆ. ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಮಾಡಲಾಗಿದೆ ಎಂದರು.
ಪ್ರತಿಯೊಬ್ಬರೂ ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸೈನಿಕರು ಭಯೋತ್ಪಾದನೆ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರಿಗೆ ನಮನ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಭಾರತದ ವಿರುದ್ಧ ಯಾರು, ಏನೇ ಷಡ್ಯಂತ್ರ ಮಾಡಿದರೂ, ಅವರನ್ನು ಹಣಿಯಲು ಪಕ್ಷಾತೀತವಾಗಿ ನಾವು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ. ಸೈನ್ಯಕ್ಕೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಆಶಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಚಂದನ್, ಯುವ ಕಾಂಗ್ರೆಸ್ ಮುಖಂಡರು ಇದ್ದರು.