ಜಿಲ್ಲೆ

ರಕ್ತದಾನ ರಥಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿ

ಹಾನಗಲ್ಲ: ರಕ್ತದಾನದ ಕುರಿತು ಗ್ರಾಮೀಣ ಪ್ರದೇಶಗಳಲ್ಲೂ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ವಿುಯ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ರಕ್ತದಾನ ರಥವನ್ನಾಗಿ ಪರಿವರ್ತಿಸಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.

ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ವಿು ಸಂಚಾಲಕ, ವೃತ್ತಿಯಲ್ಲಿ ಪೊಲೀಸ್ ಆಗಿರುವ ಕರಬಸಪ್ಪ ಗೊಂದಿ ಅವರ ನೇತೃತ್ವದಲ್ಲಿ ಕಳೆದ ವರ್ಷ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ರಕ್ತದಾನ ರಥವನ್ನಾಗಿ ಪರಿವರ್ತಿಸಲಾಗಿತ್ತು. ಪ್ರತಿದಿನ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಈ ಬಸ್, ರಕ್ತದಾನದ ಕುರಿತು ಜನಜಾಗೃತಿಯ ಸಂದೇಶಗಳನ್ನು ಹೊತ್ತು ಹಾನಗಲ್ಲಿನಿಂದ ಹಾವೇರಿಗೆ ಸಾಗುತ್ತಿತ್ತು. ಒಂದು ವರ್ಷದಿಂದ ಪ್ರತಿದಿನ ಅಕ್ಕಿಆಲೂರು ಮಾರ್ಗವಾಗಿ ಹಲವು ಗ್ರಾಮಗಳ ಮೂಲಕ ಸಂಚರಿಸುತ್ತಿದ್ದ ಈ ವಾಹನ, ರಕ್ತದಾನದ ಕುರಿತಾಗಿ ಸಾರ್ವಜನಿಕರಲ್ಲಿದ್ದ ಮೂಢನಂಬಿಕೆ ತೊರೆಯುವ ಸಂದೇಶಗಳನ್ನು ಸಾರುತ್ತಿತ್ತು. ಇದರಿಂದಾಗಿ ಒಂದಷ್ಟು ಗ್ರಾಮಗಳಲ್ಲಿ ಸ್ವಯಂಸೇವಾ ಸಂಘಗಳ ಆಶ್ರಯದಲ್ಲಿ ರಕ್ತದಾನ ಶಿಬಿರಗಳೂ ಆಯೋಜನೆಗೊಳ್ಳುವಂತಾಯಿತು. ಸ್ವಯಂ ಪ್ರೇರಿತರಾಗಿ ನೂರಾರು ಜನ ರಕ್ತದಾನ ಮಾಡಿರುವುದು ಈ ರಥದ ಯಶಸ್ಸಿನ ಮೆಟ್ಟಿಲಾಗಿತ್ತು.

ರಕ್ತದಾನ ರಥದ ಯೋಜನೆ ರೂಪಿಸಿದ ಸ್ನೇಹಮೈತ್ರಿ ಬ್ಲಡ್ ಆರ್ವಿು ಸಂಚಾಲಕ ಕರಬಸಪ್ಪ ಗೊಂದಿ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಿದೆ.

ಪ್ರಯಾಣಿಕರಿಗೆ ನಮ್ಮ ಸಂಸ್ಥೆಯ ವಾಹನವೊಂದು ರಕ್ತದಾನ ರಥವಾಗಿ ಪರಿವರ್ತನೆಗೊಂಡು, ಪ್ರಯಾಣದ ವ್ಯವಸ್ಥೆಯೊಂದಿಗೆ ಬೇರೊಂದು ಜೀವವನ್ನು ಉಳಿಸುವ ನಿಟ್ಟಿನಲ್ಲಿ ಪ್ರೇರಣೆ ನೀಡಿ, ಜಾಗೃತಿಯುಂಟು ಮಾಡುವ ಕಾರ್ಯ ಕೈಗೊಂಡಿರುವುದು ಸಂತಸ ತಂದಿದೆ. ಇದರಿಂದಾಗಿ ನಮ್ಮ ಸಂಸ್ಥೆಯ ಗೌರವ ಹೆಚ್ಚಾಗಿದೆ.| ವಿ.ಎಂ .ಅರ್ಕಾಚಾರಿ, ಘಟಕ ವ್ಯವಸ್ಥಾಪಕ ಹಾನಗಲ್ಲ