ಜಿಲ್ಲೆ

ರಕ್ತದಾನ ಮಾಡಿ ಮತ್ತೋಬ್ಬರ ಜೀವ ಉಳಿಸಿ: ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಕರೆ

ಹಾಸನ: ಯಾಂತ್ರಿಕ ಯುಗದಲ್ಲಿ ಮನುಷ್ಯರು ನಾನಾ ರೋಗಗಳಿಂದ ಬಳತ್ತಿದ್ದು, ರಕ್ತದಾನ ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಯುವ ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕದ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದಿಂದ ಆರೋಗ್ಯ ಸಂರಕ್ಷಣೆ ಜತೆಗೆ ಮತ್ತೊಬ್ಬರ ಜೀವ ಉಳಿಸಲು ಕೂಡ ಸಹಕಾರಿಯಾಗಿದೆ. ಆದ್ದರಿಂದ ಯುವ ಜನತೆ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವಂತೆ ಎಂದು ಸಲಹೆ ನೀಡಿದರು.

ಯಾಂತ್ರಿಕ ಯುಗದಲ್ಲಿ ಜನರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದರ ಜತೆಗೆ ಅಪಘಾತ, ಶಸ್ತ್ರಚಿಕಿತ್ಸೆ ವೇಳೆ ತೀವ್ರ ರಕ್ತಸ್ರಾವದಿಂದ ಬಳಲುವ ರೋಗಿಗಳಿಗೆ ಮತ್ತೊಬ್ಬರ ರಕ್ತ ಮರುಜೀವ ತಂದು ಕೊಡುವ ಕೆಲಸ ಮಾಡುತ್ತದೆ. ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ಹಾಸನದಲ್ಲಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ನಿರ್ಮಾಣವಾಗಿದ್ದು, ಅನೇಕ ಬಾರಿ ಅಕ್ಕಪಕ್ಕದ ಜಿಲ್ಲೆಗಳ ಜನರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ತುರ್ತು ಸಂದರ್ಭದಲ್ಲಿ ಎಷ್ಟೇ ಹಣ ನೀಡಿದರೂ ರಕ್ತ ಸಿಗದೇ ಇರುವಂತಹ ಅನೇಕ ಉದಾಹರಣೆಗಳಿವೆ. ಆದ್ದರಿಂದ ಪ್ರತಿಯೊಬ್ಬರು ರಕ್ತ ದಾನ ಮಾಡಿ, ಇನ್ನೊಬ್ಬರ ಜೀವ ಉಳಿಸಿ ಎಂದು ಕರೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ಕೊರೋನಾ ವೇಳೆ ರಕ್ತದಾನದ ಪ್ರಮಾಣ ಕಡಿಮೆ ಆಗಿತ್ತು. ಈಗ ಕಾಲೇಜು ಆರಂಭವಾಗಿರುವುದರಿಂದ ರಕ್ತದಾನ ಮಾಡಲು ಯುವಕರು ಮುಂದಾಗಬೇಕು. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿಯ ಹುಟ್ಟು ಹಬ್ಬದ ಅಂಗವಾಗಿ ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ. ಸರ್ಕಾರದ ಸುತ್ತೋಲೆಗೆ ಅನುಗುಣವಾಗಿ ಎಲ್ಲಾ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕ ಸ್ಥಾಪಿಸಲಾಗಿದೆ. ಅವುಗಳ ಸದುಪಯೋಗ ಪಡೆದುಕೊಂಡು ರಕ್ತದಾನ ಮಾಡಿ ಜೀವ ಉಳಿಸಿ. ದೇಶದಲ್ಲಿ ರಕ್ತದ ಕೊರತೆ ಇದೆ. ಅದನ್ನು ನೀಗಿಸಲು ಯುವ ಸಮೂಹ ಮುಂದಾಗಬೇಕು. ರಕ್ತ ದಾನಕ್ಕೂ ಮುನ್ನ ತಮ್ಮ ಆರೋಗ್ಯದ ಬಗ್ಗೆಯೂ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಕ್ತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ನಗರದ ಸರ್ಕಾರಿ ಕಲಾ ಕಾಲೇಜಿನ 160ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಹೆಚ್ಚು ಬಾರಿ ರಕ್ತದಾನ ಮಾಡಿರುವ ಅರುಣ್ ಗೌಡ ಹಾಗೂ ಮಂಜುಳಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಸ್ವಾಮಿ, ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ಡಾ. ಬಿ. ಸಂಧ್ಯಾ, ಕಾಲೇಜಿನ ಪ್ರಾಂಶುಪಾಲ ಟಿ.ಪಿ. ಪುಟ್ಟರಾಜು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ವೈ.ಎಸ್. ವೀರಭದ್ರಪ್ಪ, ನಿರ್ದೇಶಕ ಎಚ್.ಎಂ. ಶಿವಣ್ಣ, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಎಚ್.ಡಿ. ದೇವರಾಜು, ಶಬ್ಭೀರ್ ಅಹಮದ್ ಇತರರು ಉಪಸ್ಥಿತರಿದ್ದರು.