ತಾಳಿಕೋಟೆ ಪಟ್ಟಣದ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮಲ್ಲನಗೌಡ ಬಿರಾದಾರ, ಡಾ.ಶ್ರೀಶೈಲ ಹುಕ್ಕೇರಿ, ವಿ.ಸಿ.ಹಿರೇಮಠ, ಬಿ.ಎನ್.ಹಿಪ್ಪರಗಿ ಇತರರಿದ್ದರು. 
ಜಿಲ್ಲೆ

ರಕ್ತದಾನ ಮಾಡಿ ಜೀವ ಉಳಿಸಿ

ತಾಳಿಕೋಟೆ: ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿವಿಧ ದಾನಗಳಲ್ಲಿ ರಕ್ತದಾನ ಮಹತ್ವದ ಸ್ಥಾನ ಪಡೆದಿದೆ ಎಂದು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಏಡ್ಸ್, ಟಿ.ಬಿ. ರೋಗ ನಿಯಂತ್ರಣ, ರಕ್ತ ಸಂಗ್ರಹ ಘಟಕಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಹೇಳಿದರು.

ಸ್ಥಳೀಯ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಕ್ತವನ್ನು ಕೃತಕವಾಗಿ ತಯಾರಿಸಲಾಗದ ಹಿನ್ನೆಲೆಯಲ್ಲಿ ಜೀವ ಉಳಿಸಲು ರಕ್ತದಾನ ಮಾಡಲು ಎಲ್ಲರೂ ಮುಂದಾಗಬೇಕು. ರಕ್ತದಾನ ಮಾಡುವವರು ಉತ್ತಮ ಆರೋಗ್ಯ ಹೊಂದುವರು. ವರ್ಷದಲ್ಲಿ 4 ಬಾಇ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ತಾಳಿಕೋಟೆಯ ಜನತೆ ಆದರ್ಶ ಪ್ರಿಯರಾಗಿದ್ದಾರೆ ರಕ್ತದಾನ ಮಾಡುವದರಲ್ಲಿಯೂ ಸಹ ಮುಂಚೂಣಿಯಲ್ಲಿ ಇರುವುದು ಸ್ಮರಣೀಯ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಮಾತನಾಡಿ, ಆರೋಗ್ಯವೇ ಭಾಗ್ಯವೆಂದು ತಿಳಿದು ಆರೋಗ್ಯವಂತರಾಗಿ ಬಾಳಬೇಕು. ಅಪಘಾತ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನರು ರಕ್ತದಾನಕ್ಕೆ ಮುಂದಾಗುವುದು ಅವಶ್ಯವಾಗಿದೆ ಎಂದರು.

ಶಿಬಿರದಲ್ಲಿ 100 ವಿದ್ಯಾರ್ಥಿಗಳ ತಪಾಸಣೆ ನಡೆಸಿ 70 ವಿದ್ಯಾರ್ಥಿಗಳ ರಕ್ತ ಸಂಗ್ರಹಿಸಲಾಯಿತು. ವೀ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ (ಹಂಪಿಮುತ್ಯಾ) ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ನಮೀತಾ ಹೊನ್ನುಟಗಿ, ವೀ.ವಿ.ಸಂಘದ ನಿರ್ದೇಶಕ ಎಂ.ಆರ್.ಕತ್ತಿ, ಸಿ.ಆರ್.ಕತ್ತಿ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಸಿದ್ದಲಿಂಗ ಸರೂರ, ಪ್ರಭುಗೌಡ ಮದರಕಲ್ಲ, ಪ್ರಾಚಾರ್ಯ ಆರ್.ವಿ.ಜಾಲವಾದಿ ಇತರರಿದ್ದರು.

ಪ್ರೊ.ರಮೇಶ ಜಾಧವ ಸ್ವಾಗತಿಸಿದರು. ತೇಜಸ್ವಿನಿ ಡಿಸಲೆ ನಿರೂಪಿಸಿದರು. ಡಾ.ಆರ್.ವಿ.ಮಿಸ್ಕನ್ ವಂದಿಸಿದರು.