ಅಥಣಿ ಗ್ರಾಮೀಣ: ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಲು ವರದಾನವಾಗಿದ್ದು, ಆರೋಗ್ಯವಂತರು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಬೆಳಗಾವಿಯ ರಕ್ತ ಭಂಡಾರ ಬಿಮ್ಸ್ ಆಸ್ಪತ್ರೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕೊಕಟನೂರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಅವಶ್ಯಕ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಮಾನವೀಯ ಸಮಾಜ ಕಾಣಲು ಸಾಧ್ಯ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ, ರಕ್ತದಾನದಿಂದಾಗುವ ಉಪಯೋಗ ಮತ್ತು ರಕ್ತ ದಾನಿಗಳ ಅರ್ಹತೆಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ೪೬ ಜನ ರಕ್ತದಾನ ಮಾಡಿದರು. ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಕೊಕಟನೂರ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಧೂಳಶೆಟ್ಟಿ, ಪ್ರಚಾರ್ಯ ಪರಪ್ಪ ಮಗದುಮ್, ಡಾ.ಮುರಾರಿ ಬಣಜ, ಗೂಳಪ್ಪ ಪೂಜಾರಿ, ಡಾ.ಗೋಪಾಲ ಕುಂಬಾರ, ಡಾ.ರುತೇಜಾ ಯಡೂರ, ಜಿ.ಎ.ಮುಜಾವರ, ಸಿದ್ದರಾಮ ಮಾಣಿಕಶೆಟ್ಟಿ, ಮಹೇಶ ಝೀರಲಿ, ಮಯೂರಿ ಹುದ್ದಾರ, ಸಂದ್ಯಾ ನಾಯಿಕ, ಗಾಯತ್ರಿ ಕುಂಬಾರ ಇತರರಿದ್ದರು.