ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ, ಲಯನ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೋಲಿಕ್ರಾಸ್ ಆಸ್ಪತ್ರೆಯ ಸಹಯೋಗದಲ್ಲಿ ಮಂಗಳವಾರ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ನೇತ್ರತಪಾಸಣಾ ಶಿಬಿರವನ್ನು ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಉದ್ಘಾಟಿಸಿದರು. 
ಜಿಲ್ಲೆ

ರಕ್ತ ಪ್ರಾಣ ಉಳಿಸಿದರೆ ನೇತ್ರದಾನ ಅಂಧರ ಬದುಕಿಗೆ ಬೆಳಕು ನೀಡುತ್ತದೆ

ಚಿಕ್ಕಮಗಳೂರು: ದಾನ ದಾನಗಳಲ್ಲಿ ರಕ್ತದಾನ ಮತ್ತು ನೇತ್ರದಾನ ಅತ್ಯಂತ ಮಹತ್ವದ ದಾನಗಳಾಗಿದ್ದು, ರಕ್ತ ರೋಗಿಯ ಪ್ರಾಣ ಉಳಿಸಿದರೆ, ನೇತ್ರದಾನ ಅಂದರ ಬದುಕಿಗೆ ಬೆಳಕು ನೀಡುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ತಿಳಿಸಿದರು.
ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ, ಲಯನ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೋಲಿಕ್ರಾಸ್ ಆಸ್ಪತ್ರೆಯ ಸಹಯೋಗದಲ್ಲಿ ಮಂಗಳವಾರ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ನೇತ್ರತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೇವೆಯನ್ನು ತನ್ನ ಧ್ಯೇಯವನ್ನಾಗಿ ಕೆಲಸ ಮಾಡುತ್ತಿರುವ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ಸ್ ಸಂಘ ಮತ್ತು ಲಯನ್ಸ್ ಸಂಸ್ಥೆ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ಮಹತ್ಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಬಡಜನರ ಬದುಕಿಗೆ ಸಹಕಾರ ನೀಡಿದೆ ಎಂದರು.
ಚಿಕ್ಕಮಗಳೂರಿನ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಿರ್ದೇಶಕ ಡಾ. ಹರೀಶ್ ಮಾತನಾಡಿ, ಲಯನ್ಸ್ ಸಂಸ್ಥೆ ಮತ್ತು ಸಿವಿಲ್ ಇಂಜಿನಿಯರ್ಸ್ ಸಂಘ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಸೇವಾ ಕಾರ್ಯಕ್ರಮಗಳಿಗೆ ಮೆಡಿಕಲ್ ಕಾಲೇಜು ತನ್ನ ಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್,  ಸಾಮಾನ್ಯ ಜನರಿಗೆ ರಕ್ತದಾನ ಶಿಬಿರದ ಅನುಕೂಲವಾಗುವ ದೃಷ್ಠಿಯಿಂದ ಲಯನ್ಸ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ. ಮುಂದೆ ಸರ್ಕಾರದ ಸೇವಾ ಕಾರ್ಯಗಳಿಗೆ ಲಯನ್ಸ್ ಸಂಸ್ಥೆ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು. ಸಿವಿಲ್ ಇಂಜಿನಿಯರ್ಸ್‌ ಸಂಘದ ಅಧ್ಯಕ್ಷ ಜಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,  ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕಳೆದ ಅವಧಿಯಲ್ಲಿ ೫೦೦ ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಿತ್ತು. ಮುಂದೆ ಅಧ್ಯಕ್ಷರಾಗುವ ಸಿ.ಎನ್. ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಇನ್ನೂ ೫೦೦ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್‌ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜೈನ್, ಹೋಲಿಕ್ರಾಸ್ ಆಸ್ಪತ್ರೆಯ ಹಿರಿಯ ಪ್ರಯೋಗಾಲಯ ತಜ್ಞೆ ಲಿಲ್ಲಿ ಪೆರಿಸ್ ಸಮಾರಂಭದಲ್ಲಿ ಮಾತನಾಡಿ ಲಯನ್ಸ್ ಸಂಸ್ಥೆ ಮತ್ತು ಸಿವಿಲ್ ಇಂಜಿನಿರ‍್ಸ್ ಸಂಘದ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಚಿಕ್ಕಮಗಳೂರು ನಗರದಲ್ಲಿ ಇರುವ ಮೆಡಿಕಲ್ ಕಾಲೇಜಿನ ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರೈತ ಸಂಘದ ೧೫ ಮಂದಿ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದು ಇಲ್ಲಿ ವಿಶೇಷವಾಗಿತ್ತು. ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಸ್ವಾಗತಿಸಿದರು, ರಕ್ತದಾನ ಶಿಬಿರದ ಸಂಯೋಜಕಿ ಲಯನ್ಸ್ ನಜ್ಮಾ ಆಲಿ ವಂದಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಬಿ.ಎನ್. ವೆಂಕಟೇಶ್, ಹಿರಿಯ ಲಯನ್ಸ್ ಸದಸ್ಯ ಎಸ್.ಆರ್. ವೈದ್ಯ, ಲಯನ್ಸ್ ಉಪಾಧ್ಯಕ್ಷ ಸಿ.ಎನ್. ಕುಮಾರ್, ಖಜಾಂಚಿ ಗಿರೀಶ್ ಮತ್ತು ಶಿವಣ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.