ಚನ್ನರಾಯಪಟ್ಟಣ: ರಕ್ತದಾನ ಮಾಡುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಅದೆಷ್ಟೋ ಮಂದಿಯ ಜೀವ ಹಾಗೂ ಜೀವನ ಉಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಹೇಳಿದರು.
ಪಟ್ಟಣದ ಮಮತೆಯ ಮಡಿಲು ಆಸ್ಪತ್ರೆಯ ಆವರಣದಲ್ಲಿ ಸಿವಿಕೆಎಲ್ ಸಂಸ್ಥೆಯ ಸಹಯೋಗದಲ್ಲಿ ತೆರೆದಿರುವ ರಕ್ತ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ರಕ್ತ ಅಮೃತಕ್ಕೆ ಸಮ ಎಂದರು.
ತಾಲೂಕು ಕೇಂದ್ರಗಳಲ್ಲಿ ಅಷ್ಟೇ ಅಲ್ಲದೇ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೂ ರಕ್ತ ಕೇಂದ್ರಗಳು ಸ್ಥಾಪನೆಯಾಗಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಒಂದು ರಕ್ತ ಕೇಂದ್ರ ಪ್ರಾರಂಭ ಮಾಡುವುದು ಸುಲಭದ ಮಾತಲ್ಲ ಆದರೆ ಸಿಕೆವಿಎಲ್ ಸಂಸ್ಥೆ ಈ ಕಾರ್ಯಕ್ಕೆ ಕೈ ಹಾಕಿರುವುದು ಉತ್ತಮವಾದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ರಕ್ತ ಕೇಂದ್ರ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ. ಯುವ ಸಮುದಾಯವು ಈ ಕೇಂದ್ರಕ್ಕೆ ಆಗಮಿಸಿ ರಕ್ತದಾನ ಮಾಡಿ ಜೀವಗಳನ್ನು ರಕ್ಷಿಸಿ ಎಂದು ಸಲಹೆ ನೀಡಿದರು.
ಸಿವಿಕೆಎಲ್ ಸಂಸ್ಥೆಯ ಮೇಲ್ವಿಚಾರಕ ಲೋಹೀತ್ ಮಾತನಾಡಿ, ಬಡವರು ಹಾಗೂ ಕೈಲಾಗದ ಕುಟುಂಬಗಳಿಗೆ ಅಗತ್ಯವಿದಲ್ಲಿ ಕೇಂದ್ರದಿಂದ ಉಚಿತವಾಗಿ ರಕ್ತ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಚ.ನಾ.ಅಶೋಕ್, ಡಾ.ರಮೆಶ್ ಬಾಬು, ಡಾ.ವಿಶ್ವೇಶ್ವರಯ್ಯ, ಡಾ.ಹನೀಪ್, ನಗರ ಯೋಜನಾ ಪ್ರಾಧಕಾರದ ಮಾಜಿ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಸಂಸ್ಥೆಯ ಅಧ್ಯಕ್ಷ ಭರತ್ ಹಾಗೂ ಇತರರು ಇದ್ದರು.