ಜಿಲ್ಲೆ

ರಂಭಾಪುರಿ ಶ್ರೀಗಳ ಜನ್ಮದಿನೋತ್ಸವ ನಿಮಿತ್ತ ರೋಗಿಗಳಿಗೆ ಹಾಲು-ಹಣ್ಣು ವಿತರಣೆ

ಭದ್ರಾವತಿ: ಹಳೇನಗರದ ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸುವ ಮೂಲಕ ಬಾಳೆಹೊನ್ನೂರು ಶ್ರೀಮದ್‌ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ 67ನೇ ಜನ್ಮದಿನೋತ್ಸವವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ನಾಡು ಕಂಡ ಮಹಾನ್ ಪೂಜ್ಯರು ರಂಭಾಪುರಿ ಶ್ರೀಗಳು. ನಾಡಿನೆಲ್ಲೆಡೆ ಧರ್ಮ ಉಳಿಯಲಿ, ಶಾಂತಿ-ಸಮೃದ್ಧಿ ಸರ್ವರಿಗೂ ಲಭಿಸಲಿ, ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ ಎಂಬ ಆಶಯದೊಂದಿಗೆ ದೇಶದೆಲ್ಲೆಡೆ ನಿರಂತರವಾಗಿ ಸಂಚಾರ ಮಾಡುತ್ತಾ, ವೀರಶೈವ ಧರ್ಮದ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ರಂಭಾಪುರಿ ಶ್ರೀಗಳು ರೇಣುಕಾದಿ ಪಂಚಾಚಾರ್ಯರು, ಬಸವಾದಿ ಶಿವಶರಣರ ತತ್ವ ಆದರ್ಶಗಳನ್ನು ಎಲ್ಲೆಡೆ ಪಸರಿಸುತ್ತಾ, ಧರ್ಮ ಸಂಸ್ಕೃತಿ ಆಚರಣೆ ಉಳಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಾರ್ಯೋನ್ಮುಖರಾಗಿದ್ದಾರೆ. ಎಲ್ಲಾ ಜಾತಿಯವರಿಗೂ ಸಂಸ್ಕಾರ ಕೊಡುವ ಧರ್ಮ ಎಂದರೆ ಅದು ವೀರಶೈವ ಧರ್ಮ. ಅಂತಹ ಧರ್ಮದ ಮೂಲಕ ಸಂಸ್ಕಾರ ಕೊಡುವ ಕೆಲಸ ಜಗದ್ಗುರು ಮಾಡುತ್ತಿದ್ದು, ಅವರು ಶತಾಯುಷಿಗಳಾಗಿ ಬಾಳಲಿ ಎಂದು ಪ್ರಾರ್ಥಿಸಿದರು.