ಕನಕಗಿರಿ (ಕೊಪ್ಪಳ): ಕನಕಗಿರಿಗೂ ರಂಭಾಪುರಿ ಧರ್ಮಪೀಠಕ್ಕೂ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದ್ದು, ಇದೀಗ ಪಟ್ಟಣದಲ್ಲಿ ದೊಡ್ಡಮಟ್ಟದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನದಿಂದ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದಲ್ಲಿ ಶ್ರೀಮುಕ್ತಿ ಮಂದಿರ ಗುರುಕುಲ ಮಹಾವಿದ್ಯಾಲಯ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ನಿರ್ಮಾಣವಾಗಿರುವ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನ ಕಾಮಗಾರಿಯನ್ನು ಶನಿವಾರದಂದು ಪರಿಶೀಲನೆ ನಡೆಸಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಹಿಂದೆ ತಡವಾಗಿದ್ದ ಕಾಮಗಾರಿ ಇನ್ಮುಂದೆ ತಡವಾಗುವುದಿಲ್ಲ. ವಾಸ್ತು ಹಾಗೂ ವಿನ್ಯಾಸದಿಂದ ಕೂಡಿರುವ ಸಮುದಾಯ ಭವನದ ಕಟ್ಟಡವು ಗುಣಮಟ್ಟದ್ದಾಗಿದ್ದು, ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಉಳಿದಿರುವ ಸಣ್ಣ ಪುಟ್ಟ ಕೆಲಸಗಳು ಶೀಘ್ರವೇ ಮುಗಿಯಲಿದ್ದು, ಬಾದ್ರಪದ ಇಲ್ಲವೇ ಅಶ್ವೀಜ ಮಾಸದಲ್ಲಿ ಶಾಸ್ತ್ರೋಕ್ತ ಹಾಗೂ ವಿಧಿಬದ್ಧವಾಗಿ ಲೋಕಾರ್ಪಣೆ ಮಾಡಲಾಗುವುದು. ಒಂದು ಒಳ್ಳೆಯ ಕೆಲಸವಾಗಬೇಕಾದರೆ ಪೂಜಾ ಕೈಂಕರ್ಯಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ನಡೆಯದ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆಯನ್ನು ಉದ್ಘಾಟನೆಯ ಹಿಂದಿನ ದಿನ ನೆರವೇರಿಸಿ, ನಂತರ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಭವನದ ಉದ್ಘಾಟನೆಗಾಗಿ ಈಗಾಗಲೇ ನಾಲ್ಕೈದು ದಿನಾಂಕಗಳನ್ನು ಸಲಹಾ ಸಮಿತಿಗೆ ತಿಳಿಸಿದ್ದು, ಅದರಲ್ಲಿ ಒಂದು ದಿನವನ್ನು ನಿಗದಿಪಡಿಸಲಿದ್ದಾರೆ. ನಿರ್ಮಾಣಕ್ಕೆ ಸಹಕಾರ ನೀಡಿದವರಿಗೆ ಜಾತ್ಯಾತೀತ, ಪಕ್ಷಾತೀತವಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಪೀಠದಿಂದ ಕರೆಯಿದ್ದು, ಗಣ್ಯರನ್ನು ಸಮಿತಿಯವರು ಆಹ್ವಾನಿಸುವರು. ಕಾರ್ಯಕ್ರಮವನ್ನು ಜಾತಿ ಬೇಧ, ಪಕ್ಷ ಬೇಧ ಮರೆತು ಊರ ಹಬ್ಬದಂತೆ ಜನತೆ ಆಚರಿಸಬೇಕಿದ್ದು, ಇದಕ್ಕೆ ಯುವಕರ ಶ್ರಮ ಅಗತ್ಯವಿದೆ ಎಂದು ತಿಳಿಸಿದರು.
ಇಕ್ಕಟ್ಟಾಗಿದ್ದ ಜಾಗದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಿದ್ದಾಗ ಅಕ್ಕ ಪಕ್ಕದ ತಮ್ಮ ಜಾಗವನ್ನು ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಮರಿಯಪ್ಪ ಭತ್ತದ್ ಸೇರಿ ಇನ್ನಿತರರ ಫೋಟೊಗಳನ್ನು ಭವನದ ಒಂದೆಡೆ ಅಳವಡಿಸಲಾಗುವುದು ಎಂದರು. ಪ್ರಮುಖರಾದ ಕೆ.ಚನ್ನಬಸಯ್ಯಸ್ವಾಮಿ, ಗುರುಸಿದ್ದಪ್ಪ ಹಾದಿಮನಿ, ಮಹಾಬಳೇಶ್ವರ ಸಜ್ಜನ್, ಶೇಖರಗೌಡ ಪಾಟೀಲ್, ಬಸವರಾಜ ಗುಗ್ಗಳಶೆಟ್ರ, ಗಂಗಾಧರಸ್ವಾಮಿ ಕಲುಬಾಗಿಲಮಠ, ವೀರೇಶ ಸಮಗಂಡಿ, ಕಳಕಪ್ಪ ಹಾದಿಮನಿ, ಬಸವರಾಜ ಸಜ್ಜನ್, ಮೃತ್ಯುಂಜಯಸ್ವಾಮಿ, ವಾಗೇಶ ಹಿರೇಮಠ, ಸಂಗಪ್ಪ ಸಜ್ಜನ್ ಇತರರಿದ್ದರು.