ಜಿಲ್ಲೆ

ರಂಗೋಲಿಗಳಲ್ಲಿ ಮೂಡಿದ ಮತದಾನ ಜಾಗೃತಿ

ಚಿತ್ರದುರ್ಗ: ಜಿಲ್ಲಾ ಕ್ರೀಡಾಂಗಣ ಮುಂಭಾಗದ ರಸ್ತೆಯಲ್ಲಿ ಬೆಳಂಬೆಳಗ್ಗೆ ನೂರಾರು ಮಹಿಳೆಯರಿಂದ ಚಿತ್ತಾಕರ್ಷಕ ರಂಗೋಲಿಗಳು ಮೂಡಿಬಂದವು. ಅದರೊಳಗೆ ಮತದಾನ ಜಾಗೃತಿ ಮೂಡಿಸುವ ಸಂದೇಶ ಹೊರಹೊಮ್ಮಿದವು.

ಜಿಲ್ಲಾ ಸ್ವೀಪ್ ಅನುಷ್ಠಾನ ಸಮಿತಿಯು ಮತದಾರರ ಜಾಗೃತಿಗಾಗಿ ಶುಕ್ರವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಅನೇಕ ನಾರಿಯರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಮತದಾರರನ್ನು ಮತಗಟ್ಟೆಗೆ ಆಹ್ವಾನಿಸುವ ನಿಟ್ಟಿನಲ್ಲಿ ವರ್ಣಮಯ ರಂಗೋಲಿ ಬಿಡಿಸಿ, ವಾಹನ ಸವಾರರು, ಪಾದಚಾರಿಗಳ ಗಮನ ಸೆಳೆದರು.

ನಗರದ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿಯ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಯುವ ಮತದಾರರಿಗಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅರ್ಹರೆಲ್ಲರ ಹಕ್ಕು. ಆದ್ದರಿಂದ ಏ. 26ರಂದು ಜಿಲ್ಲಾದ್ಯಂತ ನಡೆಯಲಿರುವ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಪ್ಪದೆ, ಚಲಾಯಿಸಿ ಎಂದು ಮನವಿ ಮಾಡಿದರು.

ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಸ್ವೀಪ್ ಸಮಿತಿ ಜಿಲ್ಲಾ ಸಂಯೋಜಕಿ ಸುಷ್ಮಾರಾಣಿ ಇತರರಿದ್ದರು.