ಮೈಸೂರು: ಚಿಣ್ಣರ ಮೇಳ ಬೇಸಿಗೆ ಶಿಬಿರದ ಪ್ರಯುಕ್ತ ರಂಗಾಯಣ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಚಿಣ್ಣರ ಸಂತೆ’ ಅಕ್ಷರಶಃ ಮಾರುಕಟ್ಟೆ ಆಗಿ ರೂಪಾಂತರಗೊಂಡಿತ್ತು.
ತರಕಾರಿ, ತಿಂಡಿ-ತಿನಿಸು, ಆಟಿಕೆ, ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಪುಟಾಣಿಗಳು ವ್ಯಾಪಾರಿಗಳನ್ನು ಮೀರಿಸುವ ಚಾಕಚಕ್ಯತೆ ಮೆರೆದು ಗಮನ ಸೆಳೆದರು.
ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿದ ಮಕ್ಕಳು ಮಾರಾಟದಿಂದ ಬಂದ ಹಣವನ್ನು ಎಣಿಸುವತ್ತ ಗಮನಹರಿಸಿದರೆ, ಇನ್ನುಳಿದಂತೆ ಅನೇಕ ಮಕ್ಕಳು ತಾವೇ ಮಾರಾಟಕ್ಕೆ ಇಟ್ಟಂತಹ ಪದಾರ್ಥಗಳನ್ನು ತಿನ್ನುವುದರಲ್ಲಿ ಮಗ್ನರಾಗಿದ್ದರು.
ರಂಗಾಯಣದ ಮುಖ್ಯದ್ವಾರದಿಂದ ವನರಂಗದ ವರೆಗಿನ ದಾರಿಯುದ್ದಕ್ಕೂ ಮಕ್ಕಳು ಮಳಿಗೆ ತೆರೆದಿದ್ದರು. ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಹಲಸಿನ ಹಣ್ಣು, ಮೇಣದ ಬತ್ತಿ, ಮೊಳಕೆ ಕಾಳು, ಪಾನಿಪುರಿ, ಚಿರುಮುರಿ, ಸೊಪ್ಪು- ತರಕಾರಿ ಸೇರಿದಂತೆ ಸಂತೆಯಲ್ಲಿ ಸಿಗುವ ಎಲ್ಲ ವಸ್ತುಗಳು ಇಲ್ಲಿನ ಚಿಣ್ಣರ ಅಂಗಡಿಯಲ್ಲಿದ್ದವು.
ಮನೆಯಲ್ಲಿ ತಯಾರಿಸಿ ತಂದಿದ್ದ ಚಕ್ಕುಲಿ, ಚುಕ್ಕಿ ಸಿಹಿತಿನಿಸುಗಳು ಖಾಲಿಯಾದವು. ಸಂತೆಗೆ ಬಂದು ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಗ್ರಾಹಕರಿಗೆ ಜ್ಯೂಸ್‌ಗಳು ಕುಡಿದರು. ತಮಗೆ ಇಷ್ಟವಾದ ಜಾಗವನ್ನು ಮೊದಲು ಕಾಯ್ದಿಟ್ಟುಕೊಂಡು, ಎಲ್ಲ ವಸ್ತುಗಳನ್ನು ಜೋಡಿಸಿಕೊಂಡರು. ಸಂತೆ ಪ್ರಾರಂಭಕ್ಕೂ ಮುನ್ನ ಮರದ ನೆರಳಿಗೆ ‘ಜೂನಿಯರ್ ವ್ಯಾಪಾರಿ’ಗಳಲ್ಲಿ ಪೈಪೋಟಿ ಕಂಡು ಬಂತು.
ಚನ್ನಪಟ್ಟಣದ ಗೊಂಬೆ, ಮರದಲ್ಲಿ ತಯಾರಿಸಿರುವ ಆಟಿಕೆ, ಅಲಂಕಾರಿಕ ವಸ್ತುಗಳು, ಅಂಗಡಿಯಿಂದ ತಂದಿದ್ದ ಚಾಕೋಲೇಟ್, ವಿವಿಧ ಸಿಹಿ ತಿನಿಸುಗಳನ್ನು ಮಕ್ಕಳು ಮಾರಾಟ ಮಾಡಿದರು. ಕುರುಕುಲು ತಿಂಡಿಗಳ ಕಾರುಬಾರು ಹೆಚ್ಚಿತ್ತು.
ಇಲ್ಲಿಯ ಸಂಭ್ರಮ ನೋಡಲು ರಂಗಾಯಣ ಆವರಣಕ್ಕೆ ಆಗಮಿಸಿದ್ದ ಪಾಲಕರು, ಜನರು ಮಕ್ಕಳೊಂದಿಗೆ ವ್ಯವಹಾರ ನಡೆಸಿದರು. ಸೊಪ್ಪು ಎಷ್ಟು? ಒಣಗಿ ಹೋಗಿದೆಯಲ್ಲ, ಚೆನ್ನಾಗಿರೋದು ಕೊಡಪ್ಪ ಎಂಬ ಮಾತುಗಳನ್ನಾಡುತ್ತ ಮಕ್ಕಳ ವ್ಯವಹಾರ ಜ್ಞಾನ ಪರೀಕ್ಷಿಸಿದರು.
ತಾತ್ಕಾಲಿಕ ಸಂತೆಯಲ್ಲಿ ಪಾಲಕರು, ರಂಗಾಸಕ್ತರು, ಸಾರ್ವಜನಿಕರು ಪಾಲ್ಗೊಂಡು ಸಂತೆಗೆ ಮೆರುಗು ನೀಡಿದರು. ರಂಗ ಚಟುಚಟಿಕೆಯೊಂದಿಗೆ ಬದುಕುವ ಕಲೆ ಕಲಿಸುವ ಭಾಗವಾಗಿ ಮಕ್ಕಳು ವಿವಿಧ ಅಂಗಡಿ ತೆರೆದು ಒಂದು ದಿನದ ಸಂತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಭ್ರಮಿಸಿದರು.