ಹಾಸನ: ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿಸಿರುವ ರಂಗಾಯಣ ರೆಪರ್ಟರಿಯು ಕಳೆದ 14 ವರ್ಷಗಳಿಂದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿವೆ. ಪ್ರಸ್ತುತ 2023-24ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಎಂದು ಮೈಸೂರು ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಂಗತರಬೇತಿ ಕೋರ್ಸ್‌ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. 18ರಿಂದ ಮೇಲ್ಪಟ್ಟು 28 ವರ್ಷ ಒಳಗಿನ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ತಿಂಗಳಿಗೆ 5,000 ರೂ. ವಿದ್ಯಾರ್ಥಿವೇತನ ಪಾವತಿಸಲಾಗುವುದು.
ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ರಂಗಾಯಣದ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಸಾಮಾನ್ಯ ವರ್ಗದವರು 230 ರೂ., ಪರಿಶಿಷ್ಟ ಜಾರಿ ಮತ್ತು ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 180 ರೂ. ಗಳು (ರಂಗಕೈಪಿಡಿ ಶುಲ್ಕ 30 ರೂ. ಒಳಗೊಂಡಂತೆ) ಡಿಡಿ ಯನ್ನು ಉಪ ನಿರ್ದೇಶಕರು, ರಂಗಾಯಣ, ಮೈಸೂರು ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂ.5ರ ಸಂಜೆ 5.30ರೊಳಗೆ ತಲುಪಿಸಬೇಕು. ಅಂಚೆಯ ಮೂಲಕವೂ ಅರ್ಜಿ ಕಳುಹಿಸಬಹುದು. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು. ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿಗೆ ಅವಕಾಶವಿರುತ್ತದೆ. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ: 0821-2512639, ಮೊಬೈಲ್ ಸಂಖ್ಯೆ 9448938661 / 9148827720 / 8867514311 ಸಂಪರ್ಕಿಸುವುದು ಎಂದು ತಿಳಿಸಿದ್ದಾರೆ.