ಚಾಮರಾಜನಗರ: ಕ್ರಿಯಾಶೀಲರಾಗಿರುವ ರಂಗತಂಡಗಳ ಕಲಾ ಪ್ರದರ್ಶನಕ್ಕೆ ಅನುಕೂಲವಾಗಲೆಂದು ಸಂತೇಮರಹಳ್ಳಿಯಲ್ಲಿ ಒಂದು ಸುಸಜ್ಜಿತ ನವೀನ ಮಾದರಿಯ ರಂಗಮಂಟಪ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿ ಅಜಂತ ಟ್ರಸ್ಟ್ ಮತ್ತು ಶಾಕ್ಯ ನಾಟ್ಯ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳರಂಗ-ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂತೇಮರಹಳ್ಳಿ ಭಾಗದಲ್ಲಿ ಪೌರಾಣಿಕ ನಾಟಕಗಳನ್ನಾಡುವ ರಂಗಭೂಮಿ ಕಲಾವಿದರು ಹೆಚ್ಚಾಗಿದ್ದಾರೆ. ಕ್ರಿಯಾಶೀಲರಾಗಿರುವ ರಂಗತಂಡಗಳಿವೆ ಅವರ ಕಲಾ ಪ್ರದರ್ಶನಕ್ಕೆ ಅನುಕೂಲವಾಗಲೆಂದು ಸಂತೇಮರಹಳ್ಳಿಯಲ್ಲಿ ಒಂದು ಸುಸಜ್ಜಿತ ನವೀನ ಮಾದರಿಯ ರಂಗಮಂಟಪ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.
ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ನಡೆಸುವುದು ಸುಲಭದ ಮಾತಲ್ಲ.ಅದನ್ನು ಸವಲಾಗಿ ಸ್ವೀಕರಿಸಿ ಒಂದು ತಿಂಗಳು ಶಿಬಿರ ನಡೆಸಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗರುತಿಸಿ ಅವರಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ರಾಮಚಂದ್ರು ಮಾತನಾಡಿ, ಯುದ್ಧ ಮತ್ತು ಹಿಂಸೆಗಳಿಂದಾಗುವ ಕೆಡಕುಗಳ ಬಗ್ಗೆ ಬುದ್ಧ 2500 ವರ್ಷಗಳ ಹಿಂದಯೇ ಬೆಳಕು ಚೆಲ್ಲಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ತತ್ವವನ್ನು ಭೋಧಿಸಿದ್ದಾರೆ.ಆದ್ದರಿಂದ ಮನುಷ್ಯರಾದ ನಾವು ಶಾಂತಿ ಸಹಬಾಳ್ವೆಯಿಂದ ಬದುಕಬೇಕು ಎಂದು ತಿಳಿಸಿದರು.
ಈ ವೇಳೆ ಸಂತೇಮರಹಳ್ಳಿ ಪಿಎಸ್‌ಐ ತಾಜುದ್ಧೀನ್,ಪಿಎಸ್‌ಐ ಚಂದ್ರಶೇಖರ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ಎಂ.ಪಿ.ರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಮಹೇಶ್ ಕುಮಾರ್,ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರು, ಮುಖಂಡರಾದ ಬಾಗಳಿ ರೇವಣ್ಣ, ಡಿ.ಪಿ.ರಾಜು, ಮಾದೇಶ್, ಹಿರಿಯ ರಂಗಕರ್ಮಿ ಮತ್ತು ಸಾಹಿತಿ ಕಮರವಾಡಿ ಮಹದೇವಸ್ವಾಮಿ, ಸಂಘದ ಅಧ್ಯಕ್ಷ ಮಹೇಶ ಕುಮಾರ್, ಸುಜಾತಾ ರಮೇಶ್, ಕಾರ್ಯದರ್ಶಿ ಎಂ.ಆರ್.ಪ್ರಭಾವತಿ ಕಿರಣ್, ರಮೇಶ್, ಜನ್ನೂರು ಶೇಖರ್, ಬಸವಟ್ಟಿ ಮಹದೇವಸ್ವಾಮಿ, ರಾಜಶೇಖರ್ ಕಿಚ್ಚ, ಜಯಾ, ಚಿಕ್ಕತಾಯಿ ಹಾಜರಿದ್ದರು.