ಜಿಲ್ಲೆ

ರಂಗಭೂಮಿಯಿಂದ ಸಾಮಾಜಿಕ ಕಾಳಜಿ, ಬದ್ಧತೆ ಸಾಧ್ಯ: ನಾ.ರತ್ನ

ಮೈಸೂರು: ರಂಗಭೂಮಿ ನಟನೆಯ ಜೊತೆಗೆ ಸಾಮಾಜಿಕ ಕಾಳಜಿ, ಬದ್ಧತೆ ಅಲ್ಲದೇ ಮುಖ್ಯವಾಗಿ ಒಳ್ಳೇಯ ಮನುಷ್ಯನನ್ನು ರೂಪಿಸುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ನಾ.ರತ್ನ ಅಭಿಪ್ರಾಯಪಟ್ಟರು.
ನಿರಂತರ ಫೌಂಡೇಶನ್‌ನಿಂದ ಮಾನಸಗಂಗೋತ್ರಿಯ ಗಾಂಧಿಭವನದಲ್ಲಿ ಭಾನುವಾರದಿಂದ ಆಯೋಜಿಸಿರುವ ಒಂದು ತಿಂಗಳ ತರಬೇತಿ ಶಿಬಿರ ‘ಸಹಜ ರಂಗ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಾವಿದರಾಗಬಯಸುವವರು ಮೊದಲು ಅಧ್ಯಯನ ಮಾಡಬೇಕು. ಗಾಂಧಿ, ಅಂಬೇಡ್ಕರ್ ಸೇರಿದಂತೆ ಇತರರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲೆಡೆ ಬರಿ ಘೋಷಣೆಗಳು ಅಗುತ್ತಿದ್ದು, ಘೋಷಣೆಗಳ ಹಿಂದಿನ ಅರ್ಥ ತಿಳಿದುಕೊಳ್ಳಬೇಕು. ರಂಗಭೂಮಿ ಕೇವಲ ನಟನೆ ಮಾತ್ರ ಕಲಿಸದೆ ಸಹಾನುಭೂತಿ, ಸಾಮಾಜಿಕ ಕಾಳಜಿ ಜೊತೆಗೆ ಒಳ್ಳೇಯ ಮನುಷ್ಯನನ್ನು ರೂಪಿಸುತ್ತದೆ ಎಂದು ಹೇಳಿದರು.
ನಿರಂತರ ಫೌಂಡೇಶನ್ ಸಾಮಾಜಿಕವಾಗಿ ಚಿಂತಿಸುತ್ತಾ ಹದಿನೈದು ವರ್ಷದಿಂದ ಶಿಬಿರ ಆಯೋಜಿಸಿಕೊಂಡು ಬರುತ್ತಿದ್ದು, ಅನೇಕರಿಗೆ ತರಬೇತಿ ನೀಡುತ್ತಿದೆ. ಶಿಬಿರಾರ್ಥಿಗಳಿಗೆ ಮುಖ್ಯವಾಗಿ ನಾಟಕ, ನಟನೆಗೆ ನಿಮ್ಮನ್ನು ಪರಿಚಯಿಸಬೇಕಾಗುತ್ತದೆ. ನಿಮಗೆ ಸಿನಿಮಾ, ನಟನೆಗೆ ಮಾತ್ರ ಇಲ್ಲಿ ಕಲಿಸುವುದಿಲ್ಲ, ನಾಟಕದ ಕುರಿತು ಹುಚ್ಚು ಹತ್ತಿಸಲಾಗುತ್ತದೆ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗಬೇಕಿರುವುದು ಶಿಬಿರಾರ್ಥಿಗಳು ಎಂದರು.
ಗಾಂಧಿ ಭವನದ ನಿರ್ದೆಶಕ ಪ್ರೊ.ಎಂ.ಶಂಕರ್ ಮಾತನಾಡಿ, ಗಾಂಧಿ ಎಂಬ ಹೆಸರು ಬರಿ ಹೆಸರಲ್ಲ. ಜೀವನ ಕ್ರಮ, ಗಾಂಧಿ ಎಂಬುದೊಂದು ಸಂಸ್ಕೃತಿ, ಅನೇಕರು ಅದನ್ನು ಅನುಸರಿಸಿಕೊಂಡು ಬಂದಿದ್ದಾರೆ. ಗಾಂಧಿ ಕೊಂದದ್ದನ್ನು ಒಂದು ದುರಂತವಾದರೆ, ಗಾಂಧಿ ಮೌಲ್ಯಗಳನ್ನು ಕೊಲ್ಲುವುದು ಇನ್ನೂ ದೊಡ್ಡ ದುರಂತ. ಈ ದೇಶದಲ್ಲಿ ನಡೆಯುವ ಆಗುಹೋಗುಗಳಲ್ಲಿ ಗಾಂಧಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದರು.
ಜಗತ್ತೇ ಬೇರೆದಾರಿಯಲ್ಲಿ ಹೋದರೂ ನಾವು ಸರಿಯಾದ ದಾರಿಯಲ್ಲಿ ಹೋಗಬೇಕು. ಇಂದಿನ ಯುವಜನತೆ ಸಂವೇದನಾ ಶೀಲಯನ್ನು ಬೆಳೆಸಿಕೊಳ್ಳುವಂತಾಗಲಿ ಎಂದ ಅವರು, ಮುಂದಿನ ಜನವರಿ 26 ಗಾಂಧಿ ಹತ್ಯೆಯಾಗಿ 75 ವರ್ಷ ಆಗುತ್ತದೆ. ಗಾಂಧೀಜಿ ಹತ್ಯೆಯನ್ನು ಸಂಭ್ರಮಿಸುತ್ತಿರುವ ಈ ಸಂದರ್ಭವನ್ನು ಅದನ್ನು ಹೇಗೆ ಗ್ರಹಿಸಿಬೇಕು ಎಂದು ತಿಳಿಯದಾಗಿದೆ ಎಂದು ವಿಷಾಧಿಸಿದರು.
ಬೆಂಗಳೂರಿನ ಹಸಿರು ಫೌಂಡೇಶನ್‌ನ ಹೊನ್ಗಳ್ಳಿ ಗಂಗಾಧರ್ ಮಾತನಾಡಿ, ಹದಿನೈದು ವರ್ಷಗಳಿಂದ ನಿರಂತರವಾಗಿ ರಂಗಶಿಬಿರ ನಡೆಸಿಕೊಂಡು ಬರುವುದು ಸವಾಲಿನ ಕೆಲಸ. ಹಿಂದೆ ಬದುಕು ನಡೆಸಲು ಕೆಲವೇ ಕೆಲಸಗಳಿದ್ದವು, ಆದರೆ ಈಗ ಹಲವಾರು ಕ್ಷೇತ್ರಗಳು ತೆರೆದುಕೊಂಡಿದ್ದು, ನಿಮಗೆ ತೃಪ್ತಿ ತರುವ ಕೆಲಸವನ್ನು ಶ್ರದ್ಧೆಯಿಂದ ಆಯ್ಕೆ ಮಾಡಿಕೊಳ್ಳಿ. ಇಂತಹ ಶಿಬಿರಗಳು ಹೆಚ್ಚು ನಡೆಯುವಂತಾಗಲಿ ಎಂದು ಆಶಿಸಿದರು.
ನಿರಂತರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಪ್ರಸಾದ್ ಕುಂದೂರು ಮಾತನಾಡಿ ಇವತ್ತಿನ ವರ್ತಮಾನದ ತಲ್ಲಣಗಳು ನಮ್ಮನ್ನು ರೂಪಿಸುತ್ತಿವ ಜೊತೆಗೆ ನಿರ್ಧರಿಸುವ ಮಟ್ಟಕ್ಕೆ ಬೆಳೆದಿವೆ. ಎಲ್ಲ ಕಲೆಯು ವರ್ತಮಾನಕ್ಕೆ ಸ್ವಂದಿಸುತ್ತಿರುತ್ತವೆ. ಯಾವುದೇ ಕಲೆ ವರ್ತಮಾನಕ್ಕೆ ಸ್ಪಂದಿಸದೇ ಹೋದರೆ ಅದು ಕಲೆಯಾಗಿ ಉಳಿಯುವುದಿಲ್ಲ. ನಮ್ಮ ವರ್ತಮಾನದ ಸಂಗತಿಗಳಿಗೆ ಮುಖಾಮುಖಿಯಾಗಲು ನಾಟಕವನ್ನು ಕಲೆಯಾಗಿ ಬಳಸುವ ಪ್ರಯತ್ನವೇ ಸಹಜರಂಗದ ಉದ್ದೇಶವಾಗಿವೆ ಎಂದು ಹೇಳಿದರು.