ಜಿಲ್ಲೆ

ರಂಗಭೂಮಿಯದ್ದೇ ವಿಶಿಷ್ಟ ಬರಹ:  ಪ್ರೊ.ವಿಕ್ರಂ ರಾಜೇ ಅರಸ್

ಮೈಸೂರು: ರಂಗಭೂಮಿಯು ತನ್ನದೇ ಆದ ವಿಶಿಷ್ಟ ಬರಹ ಒಳಗೊಂಡಿದ್ದು, ಸಾಮಾಜಿಕ ಬದುಕು ಹಾಗೂ ಭಾವನಾತ್ಮಕ ಸಂಬಂಧ ಅರ್ಥೈಸಿಕೊಳ್ಳಲು, ಭಾವಗಳಿಗೆ ಪ್ರತಿಸ್ಪಂದಿಸಲು ನೆರವಾಗಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಆಂಗ್ಲ ಭಾಷಾ ಅಧ್ಯಾಪಕ ಪ್ರೊ.ವಿಕ್ರಂ ರಾಜೇ ಅರಸ್ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಸೃಜನಶೀಲ ಬರವಣಿಗೆ ಮತ್ತು ರಂಗಭೂಮಿ’ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ರಂಗಭೂಮಿಯು ಕಲಾತ್ಮಕವಾಗಿ ರೂಪುಗೊಳ್ಳಲು ಸೃಜನಶೀಲ ಬರವಣಿಗೆಯ ಪಾಲು ಹೆಚ್ಚಿನದು.

ಕಲಾವಿದ ಪಾತ್ರದೊಳಗೆ ಪರಕಾಯ ಪ್ರವೇಶ ಪಡೆದು ಸಮಾಜ ತಲುಪಲು ಸೃಜನಶೀಲ ಬರಹ ಅಗತ್ಯ. ಬರಹವು ಹೆಚ್ಚು ಮನೋಜ್ಞವಾಗಿ ಮೂಡಿದಾಗ ಮಾತ್ರವೇ ಅಭಿನಯದಲ್ಲಿ ಅದು ಅಭಿವ್ಯಕ್ತಗೊಳ್ಳುತ್ತದೆ ಎಂದರು.

ಸಾಹಿತಿ ದೇವನೂರ ಮಹಾದೇವ ಅವರ ಬರಹಗಳಲ್ಲಿ ರಂಗಪ್ರಯೋಗದ ಕ್ರಿಯಾಶೀಲತೆ, ಸ್ಥಳೀಯ ಸಾಂಸ್ಕೃತಿಕ ಸೊಗಡು, ಮಾನವೀಯ ಅಂತಃಕರಣದ ತುಡಿತಗಳು ಕಾಣುತ್ತವೆ. ಇವರ ಬರಹಗಳು ರಂಗ ಪ್ರಯೋಗಕ್ಕೆ ಸೂಕ್ತವಾಗಿವೆ ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ರಂಗಭೂಮಿಯ ಸಾಹಿತ್ಯ ಬಹಳ ಪರಿಣಾಮಕಾರಿ ಎಂಬುದನ್ನು ಮನಗಾಣಲು ಷೇಕ್ಸ್‌ಪಿಯರ್‌ನ ನಾಟಕಗಳು ರಂಗ ಪ್ರಯೋಗಗೊಂಡು ಯಶಸ್ವಿಯಾದದ್ದನ್ನು ಸ್ಮರಿಸಬಹುದು. ಜಗತ್ತಿನ ಸಮಕಾಲೀನ ಸಾಮಾಜಿಕ ಬದುಕು, ನಮ್ಮ ಪರಂಪರೆ, ಬದುಕಿನ ಕಟ್ಟಳೆಗಳು ರಂಗಭೂಮಿಯ ವಸ್ತುವಾಗಬಲ್ಲವು ಎಂದರು.

ಮೈಸೂರು ವಿಶ್ವವಿದ್ಯಾಲಯದ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ರಮೇಶ್ ಜಯರಾಮಯ್ಯ ಮಾತನಾಡಿ, ರಂಗಭೂಮಿಯು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ.

ಅದು ಗತಕಾಲದ ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಬದುಕಿನ ನೆನಪನ್ನು ನಮಗೆ ನೀಡುವಂಥದ್ದು. ಇಂದಿನ ಸಮಕಾಲೀನ ಸಂದರ್ಭಕ್ಕೆ ರಂಗಭೂಮಿಯ ಆಯಾಮಗಳು ಬದಲಾಗುತ್ತಿವೆ. ಯುವ ಬರಹಗಾರರು ಇದನ್ನು ಮನಗಂಡು ಸೃಜನಶೀಲ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ.ಎಂ.ಪ್ರಭು, ಅಧ್ಯಾಪಕರಾದ ಎಲ್. ಬಿದ್ಯಾಲಕ್ಷ್ಮೀದೇವಿ, ಪಿ. ದೀಪಾ, ಡಾ. ಶೋಭಾ ಉಪಸ್ಥಿತರಿದ್ದರು. ಬಳಿಕ ಬರಹಗಾರ ಭಾಷಾಂತರಕಾರ ಡಾ. ಉದಯ್ ರವಿ ಶಾಸ್ತ್ರಿ ಅವರು ‘ರಂಗಭೂಮಿಯ ಸೃಜನಶೀಲ ಬರವಣಿಗೆ’ ಕುರಿತು ವಿಚಾರ ಮಂಡಿಸಿದರು. ನಟನಾ ರಂಗದ ಕಲಾವಿದ ಮಂಜು ಅವರು ‘ರಂಗಭೂಮಿಯ ಪರಿಕಲ್ಪನೆ’ ಬಗ್ಗೆ ವಿಚಾರ ಮಂಡಿಸಿದರು.