ಜಿಲ್ಲೆ

ರಂಗಭೂಮಿಗೆ ಸಿಜಿಕೆ ಕೊಡುಗೆ ಅಪಾರ

ಚಾಮರಾಜನಗರ: ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ ಅವರು ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಹೋರಾಟಗಾರ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಿಜಿಕೆ ರಂಗಪ್ರಶಸ್ತಿ ಪ್ರದಾನ ಹಾಗೂ ಸಾವಿತ್ರಿಬಾಯಿಫುಲೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಂಗಕರ್ಮಿ ಕೃಷ್ಣಸ್ವಾಮಿ ಅವರು ಬೀದಿ ನಾಟಕಗಳ ಮೂಲಕ ರಂಗಭೂಮಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಂಗಭೂಮಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಕಲಾವಿದರ ಕಲೆಯನ್ನು ಸಮಾಜ ಗುರುತಿಸಿ ಪೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಸಾಹಿತಿ ಕೆ.ಶ್ರೀಧರ್, ಚೆಸ್ಕಾಂ ಉಪಾಧ್ಯಕ್ಷ ಎನ್.ಮಹೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಹದೇವಸ್ವಾಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಹರಿಕಥೆ ವಿದ್ವಾಂಸ ಶಿವಕುಮಾರಶಾಸ್ತ್ರಿ, ಸಮಾಜ ಸೇವಕ ನಾಗರಾಜು, ಕರ್ನಾಟಕ ರಂಗ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜು ಇತರರು ಹಾಜರಿದ್ದರು.

ಸಿಜಿಕೆ ರಂಗ ಪ್ರಶಸ್ತಿ ಪ್ರದಾನ:

ಕೊಳ್ಳೇಗಾಲದ ಹಾರೋನಿಯಂ ಮತ್ತು ಕೀಬೋರ್ಡ್ ಕಲಾವಿದ ವೆಂಕಟೇಶ್ ಮತ್ತು ರಂಗಭೂಮಿ ಕಲಾವಿದ ಶಾಂತರಾಜು ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಕೆ.ವಿ.ಸುಬ್ಬಣ್ಣ ರಂಗ ಸಮೂಹ ಹೆಗ್ಗೋಡು ಅಭಿನಯಿಸಿದ ಸಾವಿತ್ರಿಬಾಯಿ ಫುಲೆ ನಾಟಕ ಉತ್ತಮ ಪ್ರದರ್ಶನಗೊಂಡು ಪೇಕ್ಷಕರ ಮನಮುಟ್ಟಿತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಎ.ಎಸ್.ಶೈಲಜಾ ಪ್ರಕಾಶ್ ಒಂದು ತಾಸು ನಟಿಸುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡರು.