ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿಗೆ ಜಾತಿ, ಮತ, ಧರ್ಮ, ಲಿಂಗದ ಭೇದವಿಲ್ಲ. ಸರ್ವ ಜನಾಂಗವನ್ನೂ ಒಳಗೊಳ್ಳುವ ಏಕೈಕ ಮಾಧ್ಯಮವೆಂದರೆ ಅದು ರಂಗಭೂಮಿಯಾಗಿದೆ ಎಂದು ಶಿರೂರಿನ ರಂಗಕಲಾವಿದ ಬಸವರಾಜ ಬೆಂಗೇರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎ. ಮುರಿಗೆಪ್ಪ ದತ್ತಿ ಅಂಗವಾಗಿ ಹುಬ್ಬಳ್ಳಿಯ ರಂಗಕಲಾವಿದೆ ಪುಷ್ಪಮಾಲಾ ಅಣ್ಣಿಗೇರಿ ಅವರಿಂದ ಶುಕ್ರವಾರ ಆಯೋಜಿಸಿದ್ದ ರಂಗಗೀತೆಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಷ್ಪಮಾಲಾ ಅಣ್ಣಿಗೇರಿ ಅವರು ಇಡೀ ಜೀವನವನ್ನು ರಂಗಭೂಮಿಗಾಗಿ ಗಂಧದ0ತೆ ತೇಯ್ದವರು. ಅವರಿಗೆ ಸಲ್ಲಬೇಕಾದ ಗೌರವ ಸಲ್ಲದಿರುವುದು ದುರಂತದ ಸಂಗತಿ ಎಂದರು.
ಗೌರವ ಉಪಸ್ಥಿತರಿದ್ದ ಡಾ. ಎ. ಮುರಿಗೆಪ್ಪ ಮಾತನಾಡಿ, ರಂಗಭೂಮಿಯ ಪರಂಪರೆ ಕಳಚುತ್ತಿರುವ ಸಂದರ್ಭದಲ್ಲಿ ಇಂದಿನ ಜನಾಂಗಕ್ಕೆ ರಂಗಗೀತೆಗಳ ಪರಿಚಯವಾಗಬೇಕು. ರಂಗಗೀತೆಗಳನ್ನು ಹಾಡುವ ಕಲೆ ಮುಂದುವರಿಯಬೇಕು ಎಂದರು.
ಸ0ಘದ ಅಧ್ಯಕ್ಷ ಚಂದ್ರಕಾ0ತ ಗುರಪ್ಪ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಮಾಲಾ ಅಣ್ಣಿಗೇರಿ ಅವರು ರಂಗಗೀತೆ ಪ್ರಸ್ತುಪಡಿಸಿದರು. ಬಸನಗೌಡ ಕೋಳೂರ ತಬಲಾ ಹಾಗೂ ಶಿವಾನಂದ ಬೆಂಗೇರಿ ಹಾರ್ಮೋನಿಯಂ ಸಾಥ್ ನೀಡಿದರು. ಸಾಧನಕೇರಿಯ ವನಿತಾ ಮಹಿಳಾ ವೃಂದದ ಶೋಭಾ ದೇಶಪಾಂಡೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಲೀಲಾ ಮುರಿಗೆಪ್ಪ ಶಿಶುನಾಳ ಶರೀಫರ ಗೀತೆಗಳನ್ನು ಹಾಡಿದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಡಾ. ವೀರಣ್ಣ ರಾಜೂರ, ಡಾ. ಶಶಿಧರ ನರೇಂದ್ರ, ಡಾ. ಸಿದ್ದನಗೌಡ ಪಾಟೀಲ, ಡಾ. ಸುರೇಶ ಹೊರಕೇರಿ, ಕೆ.ಎಚ್. ನಾಯಕ, ಡಾ. ಬಾಳಪ್ಪ ಚಿನಗುಡಿ, ಡಾ. ಅರವಿಂದ ಕುಲಕರ್ಣಿ, ಮೇಘಾ ಹುಕ್ಕೇರಿ, ಡಾ. ಅನಿಲ ಮೇತ್ರಿ, ಇತರರಿದ್ದರು.