ಮೈಸೂರು: ರಂಗಭೂಮಿ ಮೂಲಕ ಬದುಕು ಹಸನುಗೊಳಿಸುವ, ಸಮಾಜದಲ್ಲಿ ಸಾಮರಸ್ಯ ಮತ್ತು ಪ್ರೀತಿ ಹುಟ್ಟಿಸುವ ಕೆಲಸವಾಗಬೇಕು ಎಂದು ಲೇಖಕ ದೇವನೂರು ಬಸವರಾಜು ಹೇಳಿದರು.
ನಿರಂತರ ಫೌಂಡೇಷನ್ ವತಿಯಿಂದ ಕಿರುರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ನಿರಂತರ ರಂಗ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಕಾಲಘಟ್ಟ ವಿಷಮವಾಗಿದೆ. ನಾವು ಬದುಕುತ್ತಿರುವ ಪರಿಸ್ಥಿತಿ, ನಮ್ಮ ಸುತ್ತಲು ಆಗುತ್ತಿರುವ ಘಟನೆಗಳನ್ನು ಗಮನಿಸಿದರೆ ಆತಂಕವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರೀತಿ, ವಿಶ್ವಾಸವನ್ನು ಮರು ನಿರ್ಮಿಸಬೇಕಿದೆ. ಅದಕ್ಕೆ ರಂಗಭೂಮಿ ಉತ್ತಮ ಮಾರ್ಗ ಎಂದರು.
ಮಾನವೀಯತೆ ಎಲ್ಲೆಡೆ ನೆಲಸಬೇಕಿದೆ. ಇದು ಇಲ್ಲವಾದರೆ ಯಾರು ಬದುಕಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾಳೆಯ ನೆಮ್ಮದಿಯೂ ಕಾಣದಂತಾಗಲಿದೆ. ಜಾತಿ, ಧರ್ಮ, ಅಸಹನೆ ಹೆಚ್ಚಾಗಿದೆ. ಹೊಟ್ಟೆ ಕಿಚ್ಚಿನಲ್ಲೇ ಕಾಲ ಕಳೆದುಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿರಂತರ ಫೌಂಡೇಷನ್ ಅಧ್ಯಕ್ಷ ಎಂ.ಎಂ.ಸುಗುಣ ಮಾತನಾಡಿ, ಜಿಡಿಪಿ, ಷೇರು ಸೂಚ್ಯಂಕದ ಬೆಳವಣಿಗೆಯೇ ದೇಶದ ಪ್ರಗತಿಯಲ್ಲ. ಈ ರೀತಿಯ ಭ್ರಮಾಲೋಕವನ್ನು ಸೃಷ್ಟಿಸಲಾಗುತ್ತದೆ. ಆದರೆ, ಇದು ನಿಜವಲ್ಲ. ಸಾಂಸ್ಕೃತಿಕ ಅಭಿವ್ಯಕ್ತಿಯೇ ದೇಶದ ಸಮೃದ್ಧಿಯ ಸಂಕೇತ. ಆತ್ಮಸ್ಥೈರ್ಯ, ಆತ್ಮ ಅಭಿಮಾನವನ್ನು ಮುಕ್ತವಾಗಿ ಪ್ರಸ್ತುತ ಪಡಿಸುವ ಸಮಾಜಬೇಕಾಗಿದೆ ಎಂದರು.
ರಂಗಭೂಮಿ ಜೀವಂತ ಕಲೆ. ಇದು ಸಮಾಜದ ಆಗುಹೋಗುಗಳಿಗೆ ಮುಖಾಮುಖಿಯಾಗುತ್ತದೆ. ವರ್ತಮಾನದಲ್ಲಿ ಭವಿಷ್ಯವನ್ನು ಚಿಂತಿಸುವ, ಇತಿಹಾಸದಲ್ಲಿನ ನಕಾರಾತ್ಮಕತೆಯನ್ನು ತಿದ್ದಿ, ಕ್ರಿಯಾತ್ಮಕತೆಗೊಳಿಸುವುದೇ ರಂಗಭೂಮಿ ಎಂದರು.
ನಟ ಪ್ರಕಾಶ್ ರೈ ಇದ್ದರು. ಅಭಿನವ ವೀರಭದ್ರೇಶ್ವರ ತಂಡದ ಕಲಾವಿದರು ವೀರಗಾಸೆ, ಜಾನಪದ ನೃತ್ಯ ಪ್ರಸ್ತುತ ಪಡಿಸಿದರು. ಮಂಜು ಕೊಡಗು ನಿರ್ದೇಶನದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ರಂಗಪ್ರಯೋಗ ವಿನ್ಯಾಸದ ‘ದಶಾನನ ಸ್ವಪ್ನಸಿದ್ಧಿ’ ನಾಟಕವನ್ನು ಭಳಿರೇ ವಿಚಿತ್ರಮ್ ತಂಡದ ಕಲಾವಿದರು ಪ್ರದರ್ಶಿಸಿದರು.