ಜಿಲ್ಲೆ

ರಂಗಭೂಮಿ ಮಕ್ಕಳ ಮಾನಸಗಂಗೋತ್ರಿ: ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಮೈಸೂರು: ವಿವಿಧ ಆಕರ್ಷಣೆಯಲ್ಲಿ ಕಳೆದುಹೋಗಿರುವ ಮಕ್ಕಳಿಗೆ ನಾಟಕವನ್ನು ಥೆರಪಿಯಾಗಿ ಕಲಿಸಬೇಕಿದೆ ಎಂದು ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ರಂಗಾಯಣದ ವನರಂಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಾಲ್ಯ ಅಮೂಲ್ಯ’ ಶೀರ್ಷಿಕೆಯಡಿ ಚಿಣ್ಣರ ಮೇಳದ ಕೋಟಗಾನಹಳ್ಳಿ ರಾಮಯ್ಯ ನಾಟಕಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲ ತುಂಬಾ ಬದಲಾಗಿದೆ. ಹಾಗೆಯೇ ಮಕ್ಕಳ ಮನಸ್ಸು, ಮನಸ್ಥಿತಿ, ಮನೋಭಾವ ಸಹ ಪರಿವರ್ತನೆಯಾಗಿದೆ. ಸಾಮಾಜಿಕ ಜಾಲತಾಣ, ಮೊಬೈಲ್, ಗೇಮ್, ಪಠ್ಯಕ್ರಮದಲ್ಲೇ ಮಕ್ಕಳು ಮುಳುಗಿ ಹೋಗಿದ್ದಾರೆ.

ಅವರನ್ನು ಸೃಜನಶೀಲರಾಗಿ, ಮಾನವರಾಗಿ, ಮಾನವೀಯ ಮನುಷ್ಯರಾಗಿ ರೂಪಿಸಲು ನಾಟಕ ಅಗತ್ಯವಾಗಿದೆ. ಅದಕ್ಕಾಗಿ ಮಕ್ಕಳಿಗೆ ನಾಟಕವನ್ನು ಥೆರಪಿಯಾಗಿ ಕಲಿಸಬೇಕಿದೆ ಎಂದರು.

ಬಹುತೇಕ ಪಾಲಕರು, ಸಮಾಜವೂ ಮಕ್ಕಳ ಮನಸ್ಸನ್ನು ಡಸ್ಟ್ ಬಿನ್ ಎಂದು ತಿಳಿದುಕೊಂಡಿದೆ. ಹೀಗಾಗಿ, ಬೇಡದಿರುವುದನ್ನು ಅವರ ಮನಸ್ಸಿನಲ್ಲಿ ತುಂಬಲಾಗುತ್ತಿದೆ. ರಂಗಭೂಮಿ ಮಕ್ಕಳ ಮಾನಸಗಂಗೋತ್ರಿ. ಮಕ್ಕಳು, ಶಿಕ್ಷಣ, ರಂಗಭೂಮಿ ಇವು ಸೂಕ್ಷ್ಮ ಆಯಾಮಗಳಾಗಿವೆ. ಮಕ್ಕಳಲ್ಲಿ ನಾಟಕಗಳ ಅಭಿರುಚಿ ಬೆಳೆಸಬೇಕು ಎಂದು ಸಲಹೆ ನೀಡಿದರು.

25 ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಚಿಣ್ಣರ ಮೇಳಕ್ಕೆ ಸೇರಿಸಲು ಕರೆತಂದಿದ್ದೆ. ಆಗ ಪಂಚತಂತ್ರ ನಾಟಕ ಕಲಿಸುವುದಾಗಿ ನಿರ್ದೇಶಕರು ಹೇಳಿದ್ದರು. ಅದು ಮಿತ್ರ ಭೇದ ಹೇಳುತ್ತದೆ. ಹೀಗಾಗಿ, ಅದು ಬೇಡವೆಂದಾಗ ನನ್ನನ್ನೇ ನಾಟಕ ಬರೆಯಲು ಹೇಳಿದ್ದರು ಎಂದು ಸ್ಮರಿಸಿದರು.

ಅವರ ಒತ್ತಾಯದಿಂದ ‘ಒಗಟಿನ ರಾಣಿ’ ನಾಟಕ ಬರೆದೆ. ಒಗಟುಗಳು ನಮ್ಮ ಮಕ್ಕಳಿಗೆ ಅನ್ಯ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತವೆ. ನಮ್ಮ ಹಿರಿಕರು ಹಲವು ಜಗತ್ತನ್ನು ಮಕ್ಕಳ ಕಲ್ಪನೆಗೆ ತರುತ್ತಾರೆ.

2ನೇ ನಾಟಕ ‘ನಾಯಿ ತಿಪ್ಪ’ಕ್ಕೆ ಆಕ್ಷೇಪ ವ್ಯಕ್ತವಾದರೂ ಮಕ್ಕಳು ಅದ್ಭುತವಾಗಿ ನಟಿಸಿದರು. ಸಿನಿಮಾಕ್ಕೆ ಬರೆಯುತ್ತಿದ್ದ ನಾನು ಮಕ್ಕಳಿಗೆ ನಾಟಕ ಬರೆಯುವುದು ಕರ್ತವ್ಯ ಮತ್ತು ಜವಾಬ್ದಾರಿ ಎಂದುಕೊಂಡು ಹಠಕ್ಕೆ ಬಿದ್ದು ನಾಟಕಗಳನ್ನು ಬರೆದಿರುವೆ. ಅದಕ್ಕೆ ಕಾರಣರಾದ ಎಲ್ಲ ನಾಟಕಕಾರರಿಗೂ ನಮಿಸುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಚಿಣ್ಣರಲ್ಲಿ ಸಮ ಸಮಾಜದ ನಿರ್ಮಾಣದ ಪರಿಕಲ್ಪನೆಯನ್ನು ಬಿತ್ತಬೇಕಿದೆ. ಮಕ್ಕಳಲ್ಲಿ ತಾರತಮ್ಯ ರಹಿತ ವಾತಾವರಣದೊಂದಿಗೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ತರಬೇಕಿದೆ. ದೇಶ ಕವಲು ದಾರಿಯಲ್ಲಿ ಸಾಗುತ್ತಿದೆ. ಅದನ್ನು ಸರಿದಾರಿಗೆ ತರುವುದು ರಂಗಭೂಮಿಯಿಂದ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು ಎಂದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಸೂರು ರಂಗಾಯಣ ರಂಗಾಸಕ್ತರು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ರಾಮಯ್ಯ ಅವರು 36 ನಾಟಕಗಳನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಅವುಗಳಲ್ಲಿ 12 ನಾಟಕಗಳನ್ನು ಶಿಬಿರಾರ್ಥಿಗಳು ಅಭಿನಯಿಸಲಿದ್ದಾರೆ. ಈ ನಾಟಕಗಳು ವಾಸ್ತವದ ಕಡೆಗೆ ಬೆರಳು ತೋರಿಸುತ್ತವೆ ಎಂದರು.

ರಂಗಕರ್ಮಿ ಸಿ.ಬಸಲಿಂಗಯ್ಯ ಅವರು ಶಿಬಿರಾರ್ಥಿಗಳಿಗೆ ಬಣ್ಣ ಹಚ್ಚುವ ಮೂಲಕ ಕೋಟಗಾನಹಳ್ಳಿ ರಾಮಯ್ಯ ನಾಟಕಕೋತ್ಸವಕ್ಕೆ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗ ಸಮಾಜದ ಸದಸ್ಯರಾದ ಲಕ್ಷ್ಮೀ ಚಂದ್ರಶೇಖರ್, ಸುರೇಶ್ ಬಾಬು, ಶಿಬಿರದ ನಿರ್ದೇಶಕ ಅನಿಲ್ ರೆವೂರ್, ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು. ಶಿಬಿರದ ಮಕ್ಕಳು ಆಶಯ ಗೀತೆ ಹಾಡಿದರು.