ಚಿತ್ರದುರ್ಗ: ರಂಗಭೂಮಿ ಚಟುವಟಿಕೆಗಳು ಮಕ್ಕಳಿಗೆ ವರದಾನವಾಗಿದೆ. ಸದಾಕಲಾ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವ ಮಕ್ಕಳಿಗೆ ರಂಗ ಭೂಮಿ ಆರೋಗ್ಯಪೂರ್ಣ ಬದುಕನ್ನು ಕಲ್ಪಿಸುತ್ತದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಥಿಯೇಟರ್‌ಪೋರ್ಟ್‌ನಿಂದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಹಳೆಯ ಕಟ್ಟಡ ಆವರಣದಲ್ಲಿ ಏರ್ಪಡಿಸಿದ್ದ 25 ದಿನಗಳ ರಂಗ ತರಬೇತಿ ಕಾರ‌್ಯಾಗಾರದ ಸಮಾರೋಪ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ಚಟುವಟಿಕೆಗಳಿಂದಾಗಿ ಈ ಹಳೆಯ ಕಟ್ಟಡ ಜೀವಂತಿಕೆ ಪಡೆದುಕೊಂಡಿದೆ. ಮುಂದೆ ನಡೆಯುವ ರಂಗ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ,ರಂಗ ಚಟುವಟಿಕೆಗಳ ಮೂಲಕ ಪಠ್ಯ ಬೋಧನೆ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ. ನಿತ್ಯದ ಬದುಕಿಗೆ ರಂಗಭೂಮಿ ಸಹಕಾರಿಯಾಗಿದೆ. ಶಿಕ್ಷಕರು ರಂಗಭೂಮಿಯ ವಿವಿಧ ಆಯಾಮಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.
ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್,ಸರ್ಕಾರಿ ಕಲಾ ಕಾ ಲೇಜು ಎನ್‌ಎಸ್‌ಎಸ್ ಅಧಿಕಾರಿ ಡಾ.ವಿ.ಪ್ರಸಾದ್ ಇತರರು ಇದ್ದರು. ರಂಗನಿರ್ದೇಶಕ ಧೀಮಂತ್‌ರಾಮ್ ರಚನೆ ಮತ್ತು ನಿರ್ದೇಶನದಲ್ಲಿ ರಂಗ ತರಬೇತಿ ಶಿಬಿರದ 20ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು‘ಆಬ್ರಕಡಾಬ್ರ’ನಾಟಕ ಪ್ರದರ್ಶಿಸಿದರು. ಹೇಮಂತ್, ಡಾ.ಪ್ರಜ್ವಲ್ ರಂಗ ಸಂಗೀತ ನಿರ್ವಹಿಸಿದರು.