ಜಿಲ್ಲೆ

ರಂಗಪ್ಪನ ಬ್ರಹ್ಮರಥೋತ್ಸವ ಅದ್ದೂರಿ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆ ದೇವರಪುರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ಜರುಗಿತು.

ಸ್ವಾಮಿಯ ರಥವನ್ನು ಎಳೆಯುವ ಕ್ಷಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅನೇಕ ಭಕ್ತಸಮೂಹ ಕಾತರದಿಂದ ಗಂಟೆಗೂ ಅಧಿಕ ಹೊತ್ತು ಕಾದರು. ವೃಶ್ಚಿಕಾ ಲಗ್ನ, ಪುಬ್ಬಾ ನಕ್ಷತ್ರದ ಸಮಯಕ್ಕೆ ಸರಿಯಾಗಿ ‘ಬ್ರಹ್ಮ ರಥೋತ್ಸವ’ಕ್ಕೆ ಚಾಲನೆ ದೊರೆಯುತ್ತಿದ್ದಂತೆ ಲಕ್ಷ್ಮೀರಮಣ ಗೋವಿಂದ, ಗೋವಿಂದ.. ವೆಂಕಟರಮಣ ಗೋವಿಂದ, ಗೋವಿಂದ.. ಲಕ್ಷ್ಮೀನರಸಿಂಹ ಸ್ವಾಮಿಗೆ ಜೈ, ಹೊರಕೆರೆ ರಂಗಪ್ಪನಿಗೆ ಜೈ ಎಂದು ಜಯಘೋಷ ಮೊಳಗಿಸಿದರು. ಈ ವೇಳೆ ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.

ರಥೋತ್ಸವದ ಅಂಗವಾಗಿ ಸ್ವಾಮಿಯ ಭವ್ಯ ರಥದ ಸುತ್ತಲೂ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಬೆಳಗ್ಗೆ ಅಭಿಷೇಕ, ಪುಷ್ಪಾಲಂಕಾರ ಸೇವೆ, ಆನೆ ವಾಹನೋತ್ಸವ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು. ರಥ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ರಥೋತ್ಸವಕ್ಕೂ ಮುನ್ನ ಪುಷ್ಪಾಲಂಕೃತ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಳ್ಳಿಯ ಗರುಡವಾಹನದಲ್ಲಿ ಪ್ರತಿಷ್ಠಾಪಿಸಿ ದೇಗುಲದಿಂದ ರಥಮಂಟಪದ ಬಳಿಗೆ ಸುಸಜ್ಜಿತ ಉಚ್ಛಾಯದಲ್ಲಿ ಕರೆತರಲಾಯಿತು. ಇಲ್ಲಿ ಪೂಜೆ ಸಲ್ಲಿಸಿ, ಒಂದು ಬಾರಿ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಗರುಡ ಪ್ರದಕ್ಷಿಣೆ: ಸ್ವಾಮಿಯ ಬ್ರಹ್ಮರಥೋತ್ಸವ ಜರುಗುವ ವೇಳೆ ಗರುಡ ಹಾರಿಬಂದು ರಥವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದರೆ ಮಾತ್ರ ರಥ ಮುಂದೆ ಸಾಗುವ ಪರಂಪರೆ ಇದೆ. ಅದರಂತೆ ಈ ಬಾರಿಯೂ ಸಂಜೆ 4ಕ್ಕೆ ಗರುಡ ಬಂದು ಪ್ರದಕ್ಷಿಣೆ ಹಾಕಿದಾಗ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಇವು ಎಲ್ಲಿಂದ ಬರುತ್ತವೇ, ಹೋಗುತ್ತವೇ ಎಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಇದು ಸ್ವಾಮಿಯ ಮಹಿಮೆ ಎಂಬುದು ಈ ಭಾಗದ ಭಕ್ತರ ನಂಬಿಕೆ.

1.5 ಲಕ್ಷ ರೂ.ಗೆ ಹಾರ ಹರಾಜು: ಪ್ರತಿ ವರ್ಷದಂತೆ ರಥಕ್ಕೆ ಹಾಕುವ ಹಾರವನ್ನು ದೇಗುಲ ಸಮಿತಿಯ ಪದಾಧಿಕಾರಿಗಳು ಹರಾಜು ಹಾಕಿದರು. ಈ ಬಾರಿ 1.5 ಲಕ್ಷ ರೂ.ಗೆ ಹೊಳಲ್ಕೆರೆ ತಾಲೂಕಿನ ಚೇತನ್ ಎಂಬುವವರು ಹರಾಜಿನಲ್ಲಿ ಸ್ವಾಮಿಯ ಭಾವಚಿತ್ರ ಸಮೇತ ಹಾರವೊಂದನ್ನು ಪಡೆದುಕೊಂಡರು.

ಇಂದು ಮುಂಜಾನೆ ತೇರು: 24ರಂದು ಮುಂಜಾನೆ 4.30ಕ್ಕೆ ಕೂಡ ರಂಗಪ್ಪನ ತೇರು ಜರುಗಲಿದೆ. ನಂತರ ಭೂತ ಬಲಿಸೇವೆ, ಶೇಷೋತ್ಸವ, ಪೀಠೋತ್ಸವ, ಮಧ್ಯಾಹ್ನ 12.30ಕ್ಕೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ, ರಜತ ಪೀಠೋತ್ಸವ, ಉಯ್ಯಲೋತ್ಸವ, ಅಶ್ವ ವಾಹನೋತ್ಸವ, ಪಾರ್ವತೋತ್ಸವ, ಓಕಳಿ ಉತ್ಸವ, ಧ್ವಜಾ ಅವರೋಹಣ, ನವಿಲೋತ್ಸವ ಸೇರಿ ಇನ್ನಿತರೆ ಪೂಜಾ ಸೇವೆ ನೆರವೇರಲಿದೆ. 25ರಂದು ರಾತ್ರಿ 9.30ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ, 26ರಂದು ಸೂರ್ಯ ಮಂಡಲೋತ್ಸವ, ಪೀಠೋತ್ಸವ, ರಾತ್ರಿ 9ಕ್ಕೆ ಶಯನೋತ್ಸವ ನಡೆಯಲಿದೆ ಎಂದು ಎಸ್‌ಎಲ್‌ಎನ್ ಟ್ರಸ್ಟ್ ತಿಳಿಸಿದೆ.