ಹಾಸನ : ಚನ್ನರಾಯಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಬೂಕನಬೆಟ್ಟದ ರಂಗನಾಥಸ್ವಾಮಿ ದೇಗುಲದಲ್ಲಿ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಅರ್ಚಕ ಚಂದ್ರಯ್ಯ ಎಂದಿನಂತೆ ಪೂಜೆ ಮುಗಿಸಿ ಮಂಗಳವಾರ ಸಂಜೆ ದೇಗುಲಕ್ಕೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಪೂಜೆಗೆಂದು ಆಗಮಿಸಿದಾಗ ದೇಗುಲದಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ದೇಗುಲದ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿರುವ ಕಳ್ಳರು, ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ತೆಗೆದುಕೊಂಡು, ನಾಣ್ಯಗಳನ್ನು ಬಿಟ್ಟು ಹೋಗಿದ್ದಾರೆ.
ಹುಂಡಿಯಲ್ಲಿ ಸುಮಾರು 45 ಸಾವಿರ ರೂ. ಸಂಗ್ರಹವಾಗಿತ್ತು ಎನ್ನಲಾಗಿದೆ. ಕೂಡಲೇ ಸಮಿತಿಯವರು ಹಿರೀಸಾವೆ ಠಾಣೆಗೆ ಹಾಗೂ ಮುಜರಾಯಿ ಇಲಾಖೆಗೆ ವಿಷಯ ತಿಳಿಸಿದ್ದು, ಎಸ್‌ಐ ಸುಬ್ಬಯ್ಯ, ಆರ್‌ಐ ವೀರಾಜ್, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.