ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯದಿಂದ ಹಂಡಿಗನಾಳ ಮಾರ್ಗವಾಗಿ ನಿರ್ಮಿಸಿರುವ ರಂಗಧಾಮ ಕಾಲುವೆಯನ್ನು ಸೋಮವಾರ ಶಾಸಕ ವಿ.ಮುನಿಯಪ್ಪ, ಉಪವಿಭಾಗಾಧಿಕಾರಿ ರಘುನಂದನ್, ಸಣ್ಣ ನೀರಾವರಿ ಇಲಾಖೆಯ (ಎಚ್.ಎನ್.ವ್ಯಾಲಿ) ಎಂಜಿನಿಯರ್ ಪ್ರದೀಪ್ ಮತ್ತು ತಹಸೀಲ್ದಾರ್ ಕೆ.ಅರುಂಧತಿ ಪರಿಶೀಲನೆ ನಡೆಸಿದರು.
ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ರಂಗಧಾಮ ಕಾಲುವೆ ಅಭಿವೃದ್ಧಿಗೊಳಿಸಲು ಈಗ ಕಾಲ ಕೂಡಿ ಬಂದಿದೆ. ಒಂದೂಕಾಲು ಕೋಟಿ ರೂ.ವೆಚ್ಚದಲ್ಲಿ ಕಾಲುವೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಮುನಿಯಪ್ಪ ತಿಳಿಸಿದರು. ಈಗಾಗಲೇ ಕಾಲುವೆಯಲ್ಲಿ ತುಂಬಿದ್ದ ಗಿಡ ಗಂಟೆಗಳನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ. ಈ ಮೂಲಕ ಶಿಡ್ಲಘಟ್ಟ ತಾಲೂಕಿಗೆ ಎತ್ತಿನಹೊಳೆ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಕ್ಷೇತ್ರಕ್ಕೆ ಈ ಹಿಂದೆ ಬಿಡುಗಡೆಯಾಗಿದ್ದ 23 ಕೋಟಿ ರೂ. ಅನುದಾನವನ್ನು ಸರ್ಕಾರ ತಡೆಹಿಡಿದಿರುವುದರಿಂದ ಕೆಲಸಗಳಿಗೆ ಹಿನ್ನಡೆಯಾಗಿದೆ. ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ, ಅಧಿವೇಶನದಲ್ಲಿ ಸರ್ಕಾರದ ಧೋರಣೆ ವಿರುದ್ಧ ದನಿ ಎತ್ತುವುದಾಗಿ ನುಡಿದರು.ರಂಗಧಾಮ ಕಾಲುವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ, ತೆರವುಗೊಳಿಸಿ, ಹೂಳೆತ್ತಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಗ್ರಾಪಂ ಸದಸ್ಯ ಜಯರಾಂ, ತಾಲೂಕು ರೈತಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮುಖಂಡರಾದ ವೇಣು ಇತರರಿದ್ದರು.